ದಿತ್ವಾಹ್ ಚಂಡಮಾರುತದಿಂದ ತೀವ್ರವಾಗಿ ತತ್ತರಿಸಿರುವ ಶ್ರೀಲಂಕೆಗೆ ಭಾರತ ಸರ್ಕಾರವು 450 ದಶಲಕ್ಷ ಅಮೆರಿಕನ್ ಡಾಲರ್ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಶ್ರೀಲಂಕಾದ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಗಳಿಗೆ ಸಂಪೂರ್ಣ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ರಾಯಭಾರಿಯಾಗಿ ಕೊಲಂಬೊಗೆ ಆಗಮಿಸಿರುವ ಜೈಶಂಕರ್ ಅವರು, ಮಂಗಳವಾರ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರನ್ನು ಭೇಟಿ ಮಾಡಿ ಪ್ರಧಾನಮಂತ್ರಿಗಳ ಸಂದೇಶವನ್ನು ಅಧಿಕೃತವಾಗಿ ತಲುಪಿಸಿದ್ದಾರೆ. ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಮಾನವೀಯ ಸಹಕಾರವನ್ನು ಪುನರುಚ್ಚರಿಸಿದರು.
ಭಾರತ ಘೋಷಿಸಿರುವ ಒಟ್ಟು 450 ದಶಲಕ್ಷ ಡಾಲರ್ ನೆರವಿನಲ್ಲಿ, 350 ದಶಲಕ್ಷ ಡಾಲರ್ ಅನ್ನು ಅತ್ಯಂತ ಕಡಿಮೆ ಬಡ್ಡಿದರದ ಸಾಲವಾಗಿ ನೀಡಲಾಗುವುದು. ಉಳಿದ 100 ದಶಲಕ್ಷ ಡಾಲರ್ ಅನ್ನು ನೇರ ಸಹಾಯಧನ ರೂಪದಲ್ಲಿ ಒದಗಿಸಲಾಗುತ್ತದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.
ಚಂಡಮಾರುತ ಅಪ್ಪಳಿಸಿದ ದಿನವೇ ಭಾರತ ತಕ್ಷಣ ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದು, ಆಹಾರ ಪದಾರ್ಥಗಳು, ಡೇರೆಗಳು, ಟಾರ್ಪಾಲಿನ್, ನೈರ್ಮಲ್ಯ ಕಿಟ್‌ಗಳು, ಅಗತ್ಯ ಬಟ್ಟೆಗಳು ಹಾಗೂ ಕುಡಿಯುವ ನೀರು ಸೇರಿದಂತೆ ಸುಮಾರು 110 ಟನ್ ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕೆಗೆ ರವಾನಿಸಲಾಗಿದೆ. ಜೊತೆಗೆ ಸುಮಾರು 14.5 ಟನ್ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನೂ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.
ನವೆಂಬರ್ 28ರಂದು ಅಪ್ಪಳಿಸಿದ ದಿತ್ವಾಹ್ ಚಂಡಮಾರುತದಿಂದ ಶ್ರೀಲಂಕಾದಲ್ಲಿ ಭಾರೀ ನಷ್ಟ ಸಂಭವಿಸಿದ್ದು, 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸುಮಾರು 10 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದು, ದೇಶದ ಹಲವೆಡೆ ಮೂಲಸೌಕರ್ಯ ಸಂಪೂರ್ಣವಾಗಿ ಧ್ವಂಸವಾಗಿದೆ.
ವರದಿ : ಲಾವಣ್ಯ ಅನಿಗೋಳ




