ಉದ್ಯಮಿಯ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಕಾರು ಚಾಲಕನೇ ಸ್ನೇಹಿತರ ಸಹಾಯದಿಂದ ವಿಲ್ಲಾದಲ್ಲಿ ಭಾರಿ ಆಭರಣ ಕಳ್ಳತನ ಮಾಡಿಸಿರುವ ಪ್ರಕರಣವನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕಾರು ಚಾಲಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ದೊಡ್ಡಬಳ್ಳಾಪುರದ ಚಂದನ್ (27), ಮಂಜುನಾಥ್ (36), ಎನ್. ನರೇಂದ್ರ (28) ಹಾಗೂ ಬಿಹಾರ ಮೂಲದ ಮಂಜಿತ್ ರಾಮ್ (28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಸಂಚು ರೂಪಿಸಿ ಡಿಸೆಂಬರ್ 24ರ ರಾತ್ರಿ ವಡೇರಹಳ್ಳಿಯಲ್ಲಿರುವ ಕಟ್ಟಡ ನಿರ್ಮಾಣ ಉದ್ಯಮ ನಡೆಸುವ ಮಹಾರಾಷ್ಟ್ರ ಮೂಲದ ಉದ್ಯಮಿ ಗೋಪಾಲ್ ಶಿಂಧೆ ಅವರ ವಿಲ್ಲಾದಲ್ಲಿ ಕಳ್ಳತನ ನಡೆಸಿದ್ದರು. ಚಿನ್ನಾಭರಣ, ಲ್ಯಾಪ್‌ಟಾಪ್ ಸೇರಿ ಮೌಲ್ಯವಾದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಸದ್ಯ ನಾಲ್ವರನ್ನು ಬಂಧಿಸಿ, ಆರೋಪಿಗಳಿಂದ 1.3 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಾಲ್ಕು ಲಕ್ಷ ರೂ. ನಗದು ಹಾಗೂ ಒಂದು ಬೈಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಉದ್ಯಮಿ ಗೋಪಾಲ್ ಶಿಂಧೆ ಕುಟುಂಬದೊಂದಿಗೆ ವಿಲ್ಲಾದಲ್ಲೇ ವಾಸವಿದ್ದು, ನರೇಂದ್ರ ಕಳೆದ ಒಂದು ವರ್ಷದಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಂಜಿತ್ ರಾಮ್ ಮನೆ ಕೆಲಸಗಾರನಾಗಿದ್ದ. ಮನೆನಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣ ಹಾಗೂ ಹಣ ಇರುವುದನ್ನು ತಿಳಿದಿದ್ದ ನರೇಂದ್ರ, ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕಳ್ಳತನದ ಯೋಜನೆ ರೂಪಿಸಿ ಮಂಜಿತ್‌ಗೆ ತಿಳಿಸಿದ್ದಾನೆ. ಬಳಿಕ ದೊಡ್ಡಬಳ್ಳಾಪುರದಲ್ಲಿರುವ ತನ್ನ ಸ್ನೇಹಿತರಾದ ಚಂದನ್ ಹಾಗೂ ಮಂಜುನಾಥ್‌ಗೆ ವಿಲ್ಲಾದ ವಿಳಾಸ ನೀಡಿ ಕಳ್ಳತನಕ್ಕೆ ಪ್ರೇರೇಪಿಸಿದ್ದಾನೆ.
ಅದರಂತೆ ಡಿಸೆಂಬರ್ 24ರ ರಾತ್ರಿ ಆರೋಪಿಗಳು ವಿಲ್ಲಾದ ಎಲ್ಲಾ ಬಾಗಿಲುಗಳನ್ನು ಮುರಿದು ಒಳಪ್ರವೇಶಿಸಿ ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದರು. ಡಿಸೆಂಬರ್ 30ರಂದು ಮನೆ ಮಾಲೀಕ ಗೋಪಾಲ್ ಶಿಂಧೆ ವಾಪಸ್ ಆಗಿ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೂರು ದಾಖಲಾಗಿದರೂ ನರೇಂದ್ರ ಹಾಗೂ ಮಂಜಿತ್ ಅವರಿಗೆ ಏನೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದರು.
ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಇಬ್ಬರು ಅನುಮಾನಾಸ್ಪದ ಯುವಕರು ಹೋಟೆಲ್ ಒಂದರಲ್ಲಿ ಬಿರಿಯಾನಿ ಸೇವಿಸಿ ತುರ್ತಾಗಿ ತೆರಳಿರುವ ದೃಶ್ಯಗಳು ಲಭ್ಯವಾಗಿವೆ. ಈ ಸುಳಿವಿನ ಆಧಾರದಲ್ಲಿ ಚಿತ್ರದುರ್ಗದಲ್ಲಿ ಚಂದನ್ ಹಾಗೂ ಮಂಜುನಾಥ್‌ರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದು, ಸೂತ್ರಧಾರರಾದ ನರೇಂದ್ರ ಹಾಗೂ ಮಂಜಿತ್ ಕುರಿತು ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




