5 ಕೆಜಿ ಅಕ್ಕಿ ಬದಲಾಗಿ ಬಡ ಕುಟುಂಬಗಳಿಗೆ ಸಕ್ಕರೆ, ಅಡುಗೆ ಎಣ್ಣೆ, ತೊಗರಿ ಬೇಳೆ ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಇಂದಿರಾ ಕಿಟ್’ ಯೋಜನೆ ಜನವರಿ ತಿಂಗಳಲ್ಲಿ ಪಡಿತರದಾರರ ಕೈಗೆ ಸಿಗುವ ನಿರೀಕ್ಷೆ ಹುಸಿಯಾಗಿದೆ. ಹೊಸ ವರ್ಷದ ಆರಂಭದಲ್ಲಿ, ವಿಶೇಷವಾಗಿ ಸಂಕ್ರಾಂತಿ ಹಬ್ಬದ ವೇಳೆಗೆ ಅಂತ್ಯೋದ ಹಾಗೂ PHH ಪಡಿತರದಾರರಿಗೆ 5 ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಕಿಟ್ ವಿತರಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.
ಆದರೆ ಇದೀಗ ಸರ್ಕಾರ ಸದ್ದಿಲ್ಲದೇ ಆ ನಿರ್ಧಾರದಿಂದ ಹಿಂದೆ ಸರಿದು, ಇಂದಿರಾ ಕಿಟ್ ಬದಲಾಗಿ ಹಳೆಯ ಮಾದರಿಯಲ್ಲೇ ತಲಾ 5 ಕೆಜಿ ಅಕ್ಕಿಯನ್ನೇ ವಿತರಿಸಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ. ದೇವರಾಜ ಅರಸು ಅವರ ‘ದಾಖಲೆ ಆಡಳಿತ’ ಮುರಿದ ಸಂಭ್ರಮದಲ್ಲಿರುವ ನಡುವೆಯೇ, ಕಳೆದ ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಜನವರಿ ತಿಂಗಳಿಂದ ಪಡಿತರ ಫಲಾನುಭವಿಗಳಿಗೆ ಇಂದಿರಾ ಕಿಟ್ ವಿತರಿಸುವುದಾಗಿ ಘೋಷಿಸಿದ್ದರು.
ಆದರೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಇಂದಿರಾ ಕಿಟ್ ವಿತರಣೆಯನ್ನು ಸರ್ಕಾರ ಕೈಬಿಟ್ಟಿದ್ದು, ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ಧಾರಕರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನೇ ವಿತರಿಸುತ್ತಿದೆ. AAY ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ವಿತರಿಸಬೇಕಿದ್ದ ಇಂದಿರಾ ಕಿಟ್ಗೆ ಪ್ರತಿ ಫಲಾನುಭವಿಗೆ 422.88 ರೂ. ವೆಚ್ಚವಾಗುತ್ತಿತ್ತು.
ರಾಜ್ಯದಲ್ಲಿ ಇಂದಿರಾ ಕಿಟ್ಗೆ ಅರ್ಹವಾದ ಪಡಿತರ ಚೀಟಿಗಳ ಸಂಖ್ಯೆ 1 ಕೋಟಿ 26 ಲಕ್ಷಕ್ಕೂ ಹೆಚ್ಚು ಇದ್ದು, ಒಟ್ಟು ಫಲಾನುಭವಿಗಳ ಸಂಖ್ಯೆ 4.48 ಕೋಟಿ ಆಗಿದೆ. ಇಂದಿರಾ ಕಿಟ್ ವಿತರಣೆಗೆ ಸರ್ಕಾರಕ್ಕೆ ತಿಂಗಳಿಗೆ ಸುಮಾರು 509 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ ಸರ್ಕಾರದ ಲೆಕ್ಕಾಚಾರದ ಪ್ರಕಾರ, ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆಯ ಬದಲಾಗಿ ಇಂದಿರಾ ಕಿಟ್ ನೀಡಿದರೆ ವಾರ್ಷಿಕ ಸುಮಾರು 306 ಕೋಟಿ ರೂ. ಉಳಿತಾಯ ಸಾಧ್ಯವಾಗುತ್ತಿತ್ತು. ಸದ್ಯ ಸರ್ಕಾರದ ‘ಇಂದಿರಾ ಕಿಟ್’ ಘೋಷಣೆಯ ಮಟ್ಟದಲ್ಲೇ ಉಳಿದಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವರದಿ : ಲಾವಣ್ಯ ಅನಿಗೋಳ



