ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನುಸೂಚಿತ ಜಾತಿಗಳ ವಿಧೇಯಕ–2025ನ್ನು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಅದೇ ವೇಳೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು ಮಸೂದೆಗೆ ಸಹಿ ಹಾಕದೆ, ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸರ್ಕಾರವನ್ನು ರಾಜ್ಯಪಾಲರು ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ಎರಡೂ ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿತ್ತು. ಬಳಿಕ ರಾಜ್ಯಪಾಲರ ಅನುಮೋದನೆಗಾಗಿ ಲೋಕಭವನಕ್ಕೆ ಕಳುಹಿಸಲಾಗಿತ್ತು. ಪರಿಶಿಷ್ಟ ಜಾತಿ ಮಸೂದೆ ಕುರಿತು ಕೆಲವು ಸಂಘಟನೆಗಳು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಹೆಚ್ಚಿನ ಸ್ಪಷ್ಟೀಕರಣ ಕೋರಿ ಮಸೂದೆಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಗುಂಪು–ಎ: ಮಾದಿಗರು ಮತ್ತು 15 ಸಂಯೋಜಿತ ಜಾತಿಗಳಿಗೆ ಶೇ.6 ಮೀಸಲಾತಿ. ಗುಂಪು–ಬಿ: ಹೊಲೆಯರು ಮತ್ತು 18 ಸಂಯೋಜಿತ ಜಾತಿಗಳಿಗೆ ಶೇ.6 ಮೀಸಲಾತಿ. ಗುಂಪು–ಸಿ: ಲಂಬಾಣಿ, ಭೋವಿ, ಕೊರ್ಮ, ಕೊರ್ಚ ಸೇರಿದಂತೆ 59 ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಶೇ.5 ಮೀಸಲಾತಿ ಪಡಿಯುತ್ತಿವೆ. ಈ ಒಳಮೀಸಲಾತಿಯಿಂದ ಕೆಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆಕ್ಷೇಪಗಳು ಕೇಳಿಬಂದಿದ್ದವು. ಎಲ್ಲ ವರ್ಗಗಳ ಹಿತರಕ್ಷಣೆ ಕಾಪಾಡುವ ದೃಷ್ಟಿಯಿಂದ ರಾಜ್ಯಪಾಲರು ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ಸುಪ್ರೀಂಕೋರ್ಟ್ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ತೀರ್ಪು ನೀಡಿದ್ದರೂ, ಜಾರಿಗೆ ಮುನ್ನ ಸಮರ್ಪಕ ದತ್ತಾಂಶ ಮತ್ತು ವೈಜ್ಞಾನಿಕ ಅಧ್ಯಯನ ಅಗತ್ಯ ಎಂಬ ಅಂಶವನ್ನು ರಾಜ್ಯಪಾಲರು ಗಮನಕ್ಕೆ ತಂದಿದ್ದಾರೆ. ಒಟ್ಟಾರೆ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾದ 22 ಮಸೂದೆಗಳ ಪೈಕಿ 19 ಮಸೂದೆಗಳಿಗೆ ರಾಜ್ಯಪಾಲರ ಅನುಮೋದನೆ ದೊರೆತಿದ್ದು, ಎರಡು ಪ್ರಮುಖ ಮಸೂದೆಗಳು ತಾತ್ಕಾಲಿಕವಾಗಿ ಅಡಕವಾಗಿದೆ.
ವರದಿ : ಲಾವಣ್ಯ ಅನಿಗೋಳ




