ರಾಜ್ಯ ರಾಜಕೀಯದಲ್ಲಿ ಜನತಾ ದಳ ಪಕ್ಷ ಮಹತ್ವದ ಸಂಘಟನಾತ್ಮಕ ಬದಲಾವಣೆಗೆ ಮುಂದಾಗಿದೆ. ರಾಜ್ಯಾದ್ಯಂತ ತನ್ನ ಎಲ್ಲಾ ಘಟಕಗಳ ಮರುರಚನೆಗೆ ಮುಂದಾಗಿರುವ ಜನತಾ ದಳ ಪಕ್ಷವು, ಸಂಕ್ರಾಂತಿ ಬಳಿಕ ಹೊಸ ಪದಾಧಿಕಾರಿಗಳ ನೇಮಕಕ್ಕೆ ಸಿದ್ಧವಾಗುತ್ತಿದೆ. ಇದರಿಂದಾಗಿ ಪಕ್ಷದ ಒಳರಾಜಕೀಯದಲ್ಲಿ ಚಟುವಟಿಕೆ ಗರಿಗೆದರಿದೆ.
ಮಹಿಳಾ ಘಟಕ, ಯುವ ಜೆಡಿಎಸ್, ರೈತ ಘಟಕ, SC-ST, ವಿಭಾಗ, ಕಾನೂನು ವಿಭಾಗ, ಹಿಂದುಳಿದ ವರ್ಗಗಳ ವಿಭಾಗ ಸೇರಿದಂತೆ ಜೆಡಿಎಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 14 ಘಟಕಗಳನ್ನು ಈಗಾಗಲೇ ವಿಸರ್ಜಿಸಲಾಗಿದೆ. ಈ ಎಲ್ಲಾ ಘಟಕಗಳಿಗೆ ಹೊಸ ಮುಖಗಳು, ಹೊಸ ನಾಯಕತ್ವ ನೀಡುವ ನಿಟ್ಟಿನಲ್ಲಿ ಪಕ್ಷದ ನಾಯಕತ್ವ ಗಂಭೀರ ಚರ್ಚೆ ನಡೆಸುತ್ತಿದೆ.
ಪದಾಧಿಕಾರಿಗಳ ಆಯ್ಕೆ ಸಂಬಂಧ ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದಿದ್ದು, ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಉದ್ದೇಶದೊಂದಿಗೆ ಈ ಮರುರಚನೆ ಮಾಡಲಾಗುತ್ತಿದೆ. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ, ಅಂತಿಮ ಪಟ್ಟಿಯನ್ನು ಸಂಕ್ರಾಂತಿ ನಂತರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಈ ಮರುರಚನೆಯು ಕೇವಲ ಘಟಕ ಮಟ್ಟಕ್ಕೆ ಸೀಮಿತವಾಗದೇ, ಜಿಲ್ಲಾಮಟ್ಟದಲ್ಲಿಯೂ ಬದಲಾವಣೆ ತರಲಿದೆ. ಮೊದಲ ಹಂತದಲ್ಲಿ ಐದು ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




