Political News: ಬಳ್ಳಾರಿಯಲ್ಲಿಂದು ಬಿಜೆಪಿ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಬಿಜೆಪಿ ಹಳ್ಳಿ ಹಳ್ಳಿಗೆ ತೆರಳಿ ಹೋರಾಟ ನಡೆಸುತ್ತದೆ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಗೆ ಬಿಜೆಪಿ ಯಾವಾಗಲೂ ಇರುತ್ತದೆ ಎಂದು ಅವರು ಹೇಳಿದರು
ಬಳ್ಳಾರಿಯಲ್ಲಿ ಪೋಸ್ಟರ್ ಹಾಕುವ ವಿಚಾರದಲ್ಲಿ ನಡೆದ ಗಲಾಟೆ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದೆನು, ನಾವು ಸಂಘಟಿತರಾಗಿ ಸಂಗ್ರಾಮಕ್ಕೆ ತಯಾರಾಗಬೇಕು. ಕಾಂಗ್ರೆಸ್ ನ ಎರಡೂವರೆ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಿನ ನಿತ್ಯ ಕೊಲೆ ರೇಪು ಸುದ್ದಿ ಕೇಳಿ ಸಾಕಾಗಿದೆ. ಹಲವಾರು ರೀತಿಯಲ್ಲಿ ಪೊಲಿಸರ ದಬ್ಬಾಳಿಕೆ ಇಡೀ ರಾಜ್ಯದಲ್ಲಿ ಇದೆ ಎಂದು ಮಾಜಿ ಸಿಎಂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಈ ಘಟನೆ ಆಗಲು ಎರಡು ಕಾರಣ ಜನಾರ್ದನ ರೆಡ್ಡಿ ಕೋರ್ಟಿನ ಆದೇಶದ ಪ್ರಕಾರ ಬಳ್ಳಾರಿಗೆ ಬಂದಿದ್ದರಿಂದ ತಮಗೆ ಉಳಿಗಾಲವಿಲ್ಲ ಎಂದು, ಜನಾರ್ದರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ರಾಮುಲು ಒಂದಾಗಿದ್ದಾರೆ ಎಂದರೆ ಬಳ್ಳಾರಿಯ ಕಾಂಗ್ರೆಸ್ ನಾಯಕರ ಕುರ್ಚಿ ಅಲುಗಾಡುತ್ತಿದೆ. ರಾಮುಲು ವೇಗ, ಜನಾರ್ದನ ರೆಡ್ಡಿ ಶಕ್ತಿ, ಬೆಂಕಿ ಬಿರುಗಾಳಿ ಇದ್ದ ಹಾಗೆ. ಕಾಂಗ್ರೆಸನವರ ಗುಂಡಿಗಿಂತ ನಮ್ಮ ಎದೆ ಗಟ್ಟಿಯಿದೆ ಜನಾರ್ದನ ರೆಡ್ಡಿ, ರಾಮುಲು ಶಕ್ತಿ ಅಡಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಈ ರೀತಿಯ ಘಟನೆ ಎಲ್ಲ ಕಡೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಹೆಣ್ಣು ಮಗಳ ಬಟ್ಟೆಯನ್ನು ಪೊಲೀಸರೆ ಬಿಚ್ಚುತ್ತಾರೆ. ಕೊಲಾರದಲ್ಲಿ ಮಹಿಳಾ ಅಧಿಕಾರಿಯನ್ನು ಸುಟ್ಟು ಹಾಕುತ್ತೇನೆ ಎನ್ನುತ್ತಾರೆ. ಭದ್ರಾವತಿಯಲ್ಲಿ ಅಧಿಕಾರಿಗೆ ಶಾಸಕರ ಪುತ್ರ ಧಮ್ಕಿ ಹಾಕುತ್ತಾನೆ. ಅದೇ ರೀತಿ ಮಾಗಡಿಯಲ್ಲಿ ತಹಸಿಲ್ದಾರಗೆ ಚಪ್ಪಲೀಲಿ ಹೊಡಿತಿನಿ ಅಂತಾರೆ. ಸುಟ್ಟು ಹಾಕುವದು ಚಪ್ಪಲಿಯಲ್ಲಿ ಹೊಡೆಸುವುದು ಕಾಂಗ್ರೆಸ್ ಸಂಸ್ಕೃತಿ. ಇಲ್ಲಿ ಯಾರಿಗೂ ನೆಮ್ಮದಿ ಇಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




