ಇತ್ತೀಚೆಗೆ ನಡೆದ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಬಳಿಕ ರಾಜಕೀಯ ವಲಯದಲ್ಲಿ ಕುತೂಹಲಕರ ಬೆಳವಣಿಗೆಗಳು ಕಂಡುಬಂದಿವೆ. ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ವ್ಯಂಗ್ಯವಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಇದೀಗ ಫಲಿತಾಂಶದ ನಂತರ ಟೀಕೆಗೆ ಗುರಿಯಾಗಿದ್ದಾರೆ.
ಚುನಾವಣೆ ಪ್ರಚಾರದ ಸಂದರ್ಭ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಂಬೈಗೆ ಆಗಮಿಸಿದ್ದ ಅಣ್ಣಾಮಲೈ ಅವರನ್ನು ರಾಜ್ ಠಾಕ್ರೆ, ‘ರಸ್ಮಲೈ’ ಎಂದು ಕರೆದು ವ್ಯಂಗ್ಯವಾಡಿದ್ದರು. ಜೊತೆಗೆ, ತಮಿಳುನಾಡಿನವರು ಮಹಾರಾಷ್ಟ್ರ ಅದರಲ್ಲೂ ಮುಂಬೈ ಬಗ್ಗೆ ಹೇಗೆ ಮಾತನಾಡಬಹುದು? ಎಂದು ಪ್ರಶ್ನಿಸಿ, ಲುಂಗಿ ಉಠಾವೋ, ಪುಂಗಿ ಬಜಾವೋ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಆದರೆ ಚುನಾವಣೆ ಫಲಿತಾಂಶದಲ್ಲಿ MNS ಹೀನಾಯ ಸೋಲು ಅನುಭವಿಸಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇದರ ಬೆನ್ನಲ್ಲೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರಸ್ಮಲೈಗೆ ಭಾರೀ ಬೇಡಿಕೆ ಹೆಚ್ಚಾಗಿದ್ದು, ಒಂದೇ ದಿನದಲ್ಲಿ ಸುಮಾರು ₹10 ಕೋಟಿ ಮೌಲ್ಯದ ರಸ್ಮಲೈ ಮಾರಾಟವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಫಲಿತಾಂಶದ ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ರಸ್ಮಲೈ ಹಂಚಿ ಸಂಭ್ರಮಾಚರಣೆ ನಡೆಸಿದ್ದು, “ಹೇಗಿತ್ತು ರಸ್ಮಲೈ?” ಎಂದು ರಾಜ್ ಠಾಕ್ರೆಯನ್ನು ವ್ಯಂಗ್ಯವಾಡಿದ್ದಾರೆ. ಇತ್ತ ಬಿಜೆಪಿ ಗೆಲುವಿನಿಂದ ಕಾರ್ಯಕರ್ತರ ಮುಖದಲ್ಲಿ ಸಂತಸ ಮೂಡಿದ್ದರೆ, ರಾಜ್ ಠಾಕ್ರೆಗೆ ರಾಜಕೀಯವಾಗಿ ಮುಖಭಂಗವಾಗಿರುವುದು ಸ್ಪಷ್ಟವಾಗಿದೆ.
ಈ ಬೆಳವಣಿಗೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ವ್ಯಂಗ್ಯ ಮತ್ತು ಚುನಾವಣಾ ಫಲಿತಾಂಶದ ನಡುವಿನ ಸಂಬಂಧ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ.
ವರದಿ : ಲಾವಣ್ಯ ಅನಿಗೋಳ




