ರಾಜಧಾನಿ ಬೆಂಗಳೂರು ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಹೊಂದಿದ್ದರೂ, ಪ್ರವಾಸಿ ತಾಣವಾಗಿ ಅಗತ್ಯ ಮಟ್ಟದಲ್ಲಿ ಪ್ರಚಾರವಾಗಿರಲಿಲ್ಲ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಲಂಡನ್ ಮಾದರಿಯ ‘ಅಂಬಾರಿ ಡಬಲ್ ಡೆಕ್ಕರ್’ ಪ್ರವಾಸಿ ಬಸ್ ಸೇವೆ ಪ್ರಾರಂಭಿಸಲಾಗಿದ್ದು, ಇದು ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡಲಿದೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ H.K. ಪಾಟೀಲ್ ಅವರು ಹೇಳಿದ್ದಾರೆ.
ಬುಧವಾರ ರವೀಂದ್ರ ಕಲಾಕ್ಷೇತ್ರದ ಎದುರು ಪ್ರವಾಸಿಗರಿಗಾಗಿ ಅಂಬಾರಿ ಡಬಲ್ ಡೆಕ್ಕರ್ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಬೆಂಗಳೂರು ನಗರದಲ್ಲಿ ಮೂರು ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್ಗಳನ್ನು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಲಂಡನ್, ಮುಂಬೈ ಹಾಗೂ ಮೈಸೂರಿನ ಮಾದರಿಯಲ್ಲಿ KSTDC ಈ ಸೇವೆಯನ್ನು ಆರಂಭಿಸಿದ್ದು, ಸ್ಕೈವಾಕ್, ಅಂಡರ್ಪಾಸ್ ಮತ್ತು ಫ್ಲೈಓವರ್ಗಳಿರುವ ಮಾರ್ಗಗಳಲ್ಲಿ ಈ ಬಸ್ಗಳು ಸಂಚರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಬಸ್ ಜನವರಿ 21 ರಿಂದ ರವೀಂದ್ರ ಕಲಾಕ್ಷೇತ್ರದಿಂದ ಹೊರಟು ಹಡ್ಸನ್ ವೃತ್ತ, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ಚಿನ್ನಸ್ವಾಮಿ ಕ್ರೀಡಾಂಗಣ, ಜನರಲ್ ಪೋಸ್ಟ್ ಆಫೀಸ್, ಕರ್ನಾಟಕ ಹೈಕೋರ್ಟ್, ವಿಧಾನಸೌಧ ಮತ್ತು ಕೆ.ಆರ್. ವೃತ್ತದ ಮೂಲಕ ಹಿಂತಿರುಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇನ್ನು ಪ್ರವಾಸಿಗರಿಗೆ ಪ್ರವಾಸೋದ್ಯಮ ನಿಗಮದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಮುಂಗಡ ಬುಕ್ಕಿಂಗ್ ಮಾಡುವ ಅವಕಾಶ ನೀಡಲಾಗುತ್ತದೆ. ಟಿಕೆಟ್ ದರ: ₹180. ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಸೇವಾ ಸಮಯ ಇರತ್ತೆ.ಈ ಹೊಸ ಪ್ರಯೋಗವು ಬೆಂಗಳೂರನ್ನು ಪ್ರವಾಸಿ ನಗರವಾಗಿ ದೇಶ-ವಿದೇಶಗಳಲ್ಲಿ ಗುರುತಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ




