ಕೈ ಕಟ್ ಮಾಡಿ, ಸುಟ್ಟು ಹಾಕ್ತಿವಿ: ಟ್ರಂಪ್ ವಾರ್ನ್ – ಇರಾನ್‌ ಸವಾಲ್

ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತನ್ನನ್ನು ಕೊಲೆ ಮಾಡಲು ಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದಲೇ ಅಳಿಸಿಹಾಕುತ್ತದೆ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ.

ಇರಾನ್ ತನ್ನ ವಿರುದ್ಧ ಯಾವುದೇ ಹತ್ಯೆಗೆ ಸಂಚು ರೂಪಿಸಿದರೆ ಅದಕ್ಕೆ ಭಾರೀ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇರಾನ್ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಹಾಗೂ ಸೈನಿಕ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲೇ ಈ ಹೇಳಿಕೆ ಬಂದಿದೆ.

ಟ್ರಂಪ್ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಇರಾನ್, ಅಮೆರಿಕ ನಾಯಕರಿಗೆ ಕಠಿಣ ಸಂದೇಶ ನೀಡಿದೆ. ಇರಾನ್ ಮಿಲಿಟರಿ ವಕ್ತಾರ ಜನರಲ್ ಅಬುಲ್ ಫಜಲ್ ಶೇಕರ್ಚಿ, ನಮ್ಮ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕಡೆಗೆ ಯಾರಾದರೂ ಕೆಟ್ಟ ಉದ್ದೇಶದಿಂದ ಕೈ ಚಾಚಿದರೆ, ಆ ಕೈಯನ್ನು ಕತ್ತರಿಸುವುದಷ್ಟೇ ಅಲ್ಲ, ಅವರ ಇಡೀ ದೇಶವನ್ನೇ ಸುಟ್ಟು ಹಾಕುತ್ತೇವೆ ಎಂಬುದು ಟ್ರಂಪ್‌ಗೆ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಟ್ರಂಪ್, ಖಮೇನಿಯವರ ಸುಮಾರು 40 ವರ್ಷಗಳ ಆಡಳಿತವನ್ನು ಕೊನೆಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜೊತೆಗೆ ಖಮೇನಿಯನ್ನು ಅಸ್ವಸ್ಥ ವ್ಯಕ್ತಿ ಎಂದು ಬಣ್ಣಿಸಿದ್ದ ಟ್ರಂಪ್, ಅವರು ತಮ್ಮ ದೇಶವನ್ನು ಸರಿಯಾಗಿ ನಡೆಸಬೇಕು. ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು. ಇರಾನ್‌ಗೆ ಹೊಸ ನಾಯಕತ್ವ ಅಗತ್ಯ ಎಂದು ಹೇಳಿದ್ದರು.

ಈ ಹಿಂದೆ ಕೂಡ ಟ್ರಂಪ್, ಇರಾನ್ ತನ್ನ ವಿರುದ್ಧ ಹತ್ಯೆ ಸಂಚು ರೂಪಿಸಿದರೆ ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುವಂತೆ ತಮ್ಮ ಸಲಹೆಗಾರರಿಗೆ ಸೂಚಿಸಿದ್ದಾಗಿ ಬಹಿರಂಗಪಡಿಸಿದ್ದರು. ಡಿಸೆಂಬರ್ 28ರಿಂದ ಇರಾನ್‌ನಲ್ಲಿ ಆರಂಭವಾದ ಸರ್ಕಾರ ವಿರೋಧಿ ಪ್ರತಿಭಟನೆಗಳ ಬಳಿಕ, ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಇರಾನ್‌ನ ಕಳಪೆ ಆರ್ಥಿಕ ಸ್ಥಿತಿ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದು, ಈ ನಡುವೆ ಅಮೆರಿಕದ ಮಿಲಿಟರಿಯ ಚಟುವಟಿಕೆಗಳೂ ಹೆಚ್ಚಾಗಿವೆ. ಇದರಿಂದ ಎರಡೂ ದೇಶಗಳ ನಡುವಿನ ಸಂಘರ್ಷದ ಭೀತಿ ನಿರಂತರವಾಗಿ ಏರಿಕೆಯಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author