ಭಾರತಕ್ಕೆ ಬರದಿದ್ದರೆ ಔಟ್: ಬಾಂಗ್ಲಾಗೆ ICC ಖಡಕ್ ವಾರ್ನ್

ಭದ್ರತಾ ಭೀತಿಯ ಕಾರಣ ನೀಡಿ ಭಾರತದಲ್ಲಿ ನಡೆಯಬೇಕಿರುವ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ICC ಸಭೆಯಲ್ಲಿ ಭಾರೀ ಮುಖಭಂಗವಾಗಿದೆ. ಬುಧವಾರ ನಡೆದ ICC ಮಂಡಳಿ ಸಭೆಯಲ್ಲಿ ಈ ವಿಷಯದ ಕುರಿತು ಮತದಾನ ನಡೆಯಿದ್ದು, 14 ಸದಸ್ಯ ರಾಷ್ಟ್ರಗಳು ಬಾಂಗ್ಲಾದೇಶದ ಪ್ರಸ್ತಾಪಕ್ಕೆ ವಿರೋಧವಾಗಿ ಮತಚಲಾಯಿಸಿವೆ. ಬಾಂಗ್ಲಾದ ಪರವಾಗಿ ಕೇವಲ ಎರಡು ಮತಗಳು ಮಾತ್ರ ಲಭಿಸಿವೆ.

ಮತದಾನದ ಫಲಿತಾಂಶದ ಬಳಿಕ, ಈ ವಿಚಾರವನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ತಿಳಿಸಿ, ಒಂದು ದಿನದೊಳಗೆ ಅಂತಿಮ ನಿರ್ಧಾರವನ್ನು ತಿಳಿಸಬೇಕು ಎಂದು ICC ಬಿಸಿಬಿಗೆ ಸೂಚಿಸಿದೆ. ಒಂದು ವೇಳೆ ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಆ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಿಂದಲೇ ಕೈಬಿಟ್ಟು, ಅದರ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಲಾಗುವುದು ಎಂದು ICC ಖಡಕ್ ಎಚ್ಚರಿಕೆ ನೀಡಿದೆ.

ICC ಪ್ರಕಟಣೆಯಲ್ಲಿ, ಭಾರತದಲ್ಲಿ ಪಂದ್ಯಗಳನ್ನು ಆಯೋಜಿಸಲು ಯಾವುದೇ ರೀತಿಯ ಭದ್ರತಾ ಆತಂಕ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಬಾಂಗ್ಲಾದೇಶವು ನಿಗದಿತ ವೇಳಾಪಟ್ಟಿಯಂತೆ ಭಾರತದಲ್ಲೇ ತನ್ನ ಪಂದ್ಯಗಳನ್ನು ಆಡಲೇಬೇಕು ಎಂದು ಸೂಚಿಸಲಾಗಿದೆ. ಪಂದ್ಯಗಳನ್ನು ಸ್ಥಳಾಂತರಿಸುವುದು ಟೂರ್ನಿಯ ವ್ಯವಸ್ಥೆಗೆ ತೊಂದರೆ ಉಂಟುಮಾಡಲಿದೆ. ಜೊತೆಗೆ, ಇದರಿಂದ ICC ತನ್ನ ತಟಸ್ಥತೆಯನ್ನು ಕಳೆದುಕೊಳ್ಳುವ ಅಪಾಯವೂ ಇದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.

ಬಾಂಗ್ಲಾ ಪಂದ್ಯಗಳು ಭಾರತದಲ್ಲೇ ನಡೆಯಬೇಕು ಎನ್ನುವ ನಿರ್ಧಾರವನ್ನು ಐಸಿಸಿ ಪ್ರಕಟಿಸುವುದಕ್ಕೂ ಮುನ್ನ ಭಾರತಕ್ಕೆ ತಂಡ ಕಳಿಸುವುದಿಲ್ಲ ಎನ್ನುವ ಬಿಸಿಬಿಯ ನಿಲುವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲಿಸಿತ್ತು. ಅಲ್ಲದೆ, ಬಾಂಗ್ಲಾದ ಪಂದ್ಯಗಳನ್ನು ಆಯೋಜಿಸಲು ತಾನು ಸಿದ್ದ ಎಂದು ಬಿಸಿಬಿಗೆ ಇ-ಮೇಲ್ ಕೂಡ ಕಳುಹಿಸಿತ್ತು ಎಂದು ವರದಿ ಹೇಳಿದೆ.

ವರದಿ : ಲಾವಣ್ಯ ಅನಿಗೋಳ

About The Author