ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯು ಭರದಿಂದ ಸಾಗುತ್ತಿದೆ.ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300 ಕಿಲೋವಾಟ್ ಸಾಮರ್ಥ್ಯದ ಸೋಲಾರ್ ಗ್ರಿಡ್ ಸ್ಥಾಪನೆ ಕಾರ್ಯ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯ ಮೂಲಕ ವರ್ಷಕ್ಕೆ ಸುಮಾರು 4.50 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳ ಮೇಲ್ಭಾಗದಲ್ಲಿಯೂ, ಜೊತೆಗೆ ರಾಜಭವನ–ವಿಧಾನಸೌಧ ನಡುವಿನ ಜಾಗದಲ್ಲೂ ಒಟ್ಟು ಮೂರು ಸ್ಥಳಗಳಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗುತ್ತಿದೆ. ಉತ್ಪಾದಿತ ವಿದ್ಯುತ್ ಗ್ರಿಡ್ ಮೂಲಕ ಬಳಕೆಗೆ ಪೂರೈಕೆಯಾಗಲಿದೆ.
ಈ ಯೋಜನೆಯಿಂದ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಬಳಕೆಯಾಗುವ ಒಟ್ಟು ವಿದ್ಯುತ್‌ನ ಸುಮಾರು 20 ಶೇಕಡಾವರೆಗೂ ಸೋಲಾರ್ ಮೂಲದಿಂದ ಪೂರೈಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸೌಧದ ಐತಿಹಾಸಿಕ ಸೌಂದರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಪ್ಯಾನಲ್‌ಗಳನ್ನು ಅಳವಡಿಸಲಾಗುತ್ತಿದ್ದು, ಈ ಪ್ರಕ್ರಿಯೆ ಇನ್ನೂ 20 ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ನಂತರ ಬೆಸ್ಕಾಂನಿಂದ ಮೀಟರ್ ಅಳವಡಿಕೆಯಾದ ಬಳಿಕ ವಿದ್ಯುತ್ ಪೂರೈಕೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.ಯೋಜನೆ ಕುರಿತು ಮಾತನಾಡಿದ ಸೊಲ್ಕೋ ಇಂಡಿಯಾ ಸಹ ಸಂಸ್ಥಾಪಕ ಹರೀಶ್ ವರ್ಷಕ್ಕೆ ಸುಮಾರು 310ರಿಂದ 320 ದಿನಗಳ ಕಾಲ ಸೋಲಾರ್ ವಿದ್ಯುತ್ ಉತ್ಪಾದನೆಯಾಗುವ ಲೆಕ್ಕಾಚಾರವನ್ನು ಹೊಂದಲಾಗಿದೆ.
ವಿಧಾನಸೌಧ, ವಿಕಾಸಸೌಧದಂತಹ ಪ್ರಮುಖ ಕಟ್ಟಡಗಳಲ್ಲಿ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ ನಡೆಯುತ್ತಿರುವುದು ಇತರ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳಿಗೆ ಪ್ರೇರಣೆಯಾಗಲಿದೆ. ಈ ಯೋಜನೆಗಾಗಿ ಮಾಡಿದ ವೆಚ್ಚವೂ ಸುಮಾರು ಏಳು ವರ್ಷಗಳಲ್ಲಿ ಉಚಿತವಾಗಿ ಉತ್ಪಾದಿಸುವ ವಿದ್ಯುತ್ ಮೂಲಕ ವಾಪಸ್ ಪಡೆಯಬಹುದಾಗಿದೆ ಎಂದು ಹರೀಶ್ ಹಂದೆ ಮಾಹಿತಿ ನೀಡಿದರು.
ವರದಿ : ಲಾವಣ್ಯ ಅನಿಗೋಳ




