ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಬಜೆಟ್ ಮಂಡನೆಗೆ ಮುಹೂರ್ತ ನಿಗದಿ ಮಾಡಿಕೊಂಡಿದ್ದು, ಮಾರ್ಚ್ 6ರಂದು ಅವ್ಯಯ ಮಂಡನೆ ನಡೆಯಲಿದೆ. ಮುಖ್ಯಮಂತ್ರಿ ಕಾರ್ಯಾಲಯದ ಅಧಿಕೃತ ಮೂಲಗಳು ಈ ಮಾಹಿತಿಯನ್ನು ದೃಢಪಡಿಸಿರುವುದು ಗಮನಾರ್ಹ.
ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ನಾಯಕತ್ವ ಅಬಾಧಿತವಾಗಿದೆ ಎಂಬ ಸಂದೇಶ ರಾಜ್ಯದ ಸಾರ್ವಜನಿಕರಿಗೆ ರವಾನಿಸುತ್ತಿದ್ದಾರೆ. ಈ ಬಜೆಟ್ ವಿಶೇಷವಾಗಿ ಕೇಂದ್ರ ಕೇಂದ್ರೀಕೃತ ಯೋಜನೆಗಳು, ರಾಜ್ಯದ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪ್ರಿಯ ಹಿತದಾಯಕ ಕ್ರಮಗಳ ಸಮನ್ವಯದಿಂದ ರೂಪಿಸಲಾಗುವುದು.
ಈ ಬಜೆಟ್ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಇನ್ನೊಂದು ಹೊಸ ದಾಖಲೆ ಬರೆಯವುದಕ್ಕೆ ಮುಂದಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ರಾಜಕಾರಣಿಗಳ ಪೈಕಿ ಅವರು 2ನೇ ಸ್ಥಾನ ಪಡೆಯಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಈ ಬಜೆಟ್ಗಾಗಿ ಸಿದ್ದರಾಮಯ್ಯ ಸಿದ್ಧತೆ ಪ್ರಾರಂಭಿಸಿದ್ದಾರೆ. ಅಧಿಕಾರಿಗಳ ಜತೆಗೆ 2 ಪೂರ್ವಭಾವಿ ಸಭೆಗಳು ನಡೆದಿವೆ. ಜಂಟಿ ಅಧಿವೇಶನದ ಬಳಿಕ ಇಲಾಖಾವಾರು ಸಭೆ ನಡೆಸಲಿದ್ದಾರೆ. ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
ಇದರಲ್ಲಿ ರಾಜ್ಯಕ್ಕೆ ಸಿಗುವ ಅನುದಾನ, 16ನೇ ಹಣಕಾಸು ಆಯೋಗದಿಂದ ಲಭಿಸುವ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಸ್ಥಿತಿ ಇತ್ಯಾದಿ ಆಧರಿಸಿ ಮುಂದಿನ ನಡೆ ಇಡಲಿದ್ದಾರೆ. ಹಣಕಾಸು ಇಲಾಖೆ ಮೂಲಗಳ ಪ್ರಕಾರ ಈ ಬಾರಿಯೂ ರಾಜ್ಯದ ಒಟ್ಟಾರೆ ಸಾಲದ ಬಾಬು ಹೆಚ್ಚಲಿದ್ದು, ಆರ್ಥಿಕ ಸಮತೊ ಲನ ಸಾಧಿಸಬೇಕಾದ ಹಗ್ಗದ ಮೇಲಿನ ನಡಿಗೆ ಸಿದ್ದರಾಮಯ್ಯ ಅವರದ್ದಾಗಲಿದೆ.




