ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಏಕವಚನ ಬಳಸಿದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ರಾಜೀವ್ ಗೌಡ ಜೊತೆಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಮತ್ತೊಬ್ಬ ವ್ಯಕ್ತಿ ಮೈಕಲ್ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮೈಕಲ್ ಮಂಗಳೂರು ಮೂಲದ ಉದ್ಯಮಿಯಾಗಿದ್ದು, ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಕೇರಳ ಗಡಿಯಿಂದ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ತಡರಾತ್ರಿ ಚಿಕ್ಕಬಳ್ಳಾಪುರಕ್ಕೆ ಕರೆತಂದಿದ್ದಾರೆ. ಇಂದು ಇಬ್ಬರನ್ನು ಶಿಡ್ಲಘಟ್ಟ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ.
ಪೊಲೀಸರು ರಾಜೀವ್ ಗೌಡ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದ್ದು, ಮೈಕಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಆಶ್ರಯ ನೀಡಿದ ಆರೋಪದಲ್ಲಿ ಮಾತ್ರ ಮೈಕಲ್ ಬಂಧನವಾಗಿರುವುದರಿಂದ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ಪೊಲೀಸರು ಕೋರ್ಟ್ಗೆ ತಿಳಿಸಲಿದ್ದಾರೆ.
ಬಂಧನದ ಬಳಿಕ ರಾಜೀವ್ ಗೌಡ ಅವರನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಗೆಸ್ಟ್ ಹೌಸ್ನಲ್ಲಿ ಇರಿಸಲಾಗಿದೆ ಎನ್ನಲಾಗಿದ್ದು, ಕೇರಳದಿಂದ ದೀರ್ಘ ಪ್ರಯಾಣ ಮಾಡಿಕೊಂಡು ಬಂದ ಹಿನ್ನೆಲೆ ತಾತ್ಕಾಲಿಕ ವಿಶ್ರಾಂತಿ ನೀಡಲಾಗಿದೆ. ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




