ದೇಶದಲ್ಲಿ ATM ಕೇಂದ್ರಗಳಿಂದ ನಗದು ತೆಗೆದುಕೊಳ್ಳುವ ಪ್ರಮಾಣ 2025ರಲ್ಲಿ ಇಳಿಕೆಯ ಹಾದಿಯಲ್ಲಿದೆ ಎಂದು ATM ನಿರ್ವಹಣಾ ಸಂಸ್ಥೆಯಾದ ಸಿಎಂಎಸ್ ಇನ್ಫೋ ಸಿಸ್ಟಮ್ಸ್ ಬುಧವಾರ ತಿಳಿಸಿದೆ. ಕಳೆದ ವರ್ಷದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚಾಗಿರುವುದು ಮತ್ತು ಮಾಸಿಕ ವಹಿವಾಟುಗಳು ಹೊಸ ಎತ್ತರಕ್ಕೆ ತಲುಪಿರುವುದು ನಗದು ಬಳಕೆಯ ಇಳಿಕೆಗೆ ಪ್ರಮುಖ ಕಾರಣವಾಗಿದೆ.
2025ರಲ್ಲಿ ದೇಶಾದ್ಯಂತ ಪ್ರತಿ ಎಟಿಎಂನಿಂದ ವಿತರಿಸಲಾದ ಮಾಸಿಕ ಸರಾಸರಿ ನಗದು 1.21 ಕೋಟಿ ರೂ.ನಷ್ಟಿದೆ. ಇದು 2024-25 ರ ಹಣಕಾಸು ವರ್ಷದಲ್ಲಿದ್ದ 1.30 ಕೋಟಿ ರೂ.ಗೆ ಹೋಲಿಸಿದರೆ ಕುಸಿತವಾಗಿದೆ. ಆದರೂ, ಜನ ಒಂದು ಬಾರಿಗೆ ಹಿಂಪಡೆಯುವ ಸರಾಸರಿ ಮೊತ್ತ ಶೇಕಡಾ 4.5ರಷ್ಟು ಹೆಚ್ಚಳವಾಗಿದ್ದು, 5,586 ರೂ. ನಿಂದ 5,835 ರೂ. ಗೆ ಏರಿಕೆಯಾಗಿದೆ.
ನಗರ ಪ್ರದೇಶಗಳಿಗಿಂತ ಅರೆ-ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ನಗದು ಹಿಂಪಡೆಯುವ ಪ್ರವೃತ್ತಿ ಹೆಚ್ಚಿದ್ದು, ಮೆಟ್ರೋ ನಗರಗಳಿಗಿಂತ ಇಲ್ಲಿನ ಎಟಿಎಂಗಳಲ್ಲಿ ಹೆಚ್ಚು ಹಣ ಚಲಾವಣೆಯಾಗಿದೆ.
ಮಾನ್ಸೂನ್, ಬಿಸಿಲು ಹೆಚ್ಚಳ ಮತ್ತು ಹಬ್ಬಗಳಂತಹ ಅಂಶಗಳು ಸಹ ನಗದು ಬಳಕೆಯ ಮೇಲೆ ಪ್ರಭಾವ ಬೀರಿವೆ. ಇದೇ ವೇಳೆ, ಕಳೆದ ವರ್ಷದ ಜಿಎಸ್‌ಟಿ ಸುಧಾರಣೆಗಳ ನಂತರ ವಿಮಾ ಕ್ಷೇತ್ರದಲ್ಲಿನ ಖರ್ಚು ಶೇಕಡಾ 32ರಷ್ಟು ವೃದ್ಧಿಯಾಗಿದ್ದರೆ, ಶಿಕ್ಷಣ ಮತ್ತು ಮನರಂಜನಾ ಕ್ಷೇತ್ರಗಳಲ್ಲಿನ ವೆಚ್ಚ ಇಳಿಕೆ ಕಂಡಿದೆ.
ವರದಿ : ಲಾವಣ್ಯ ಅನಿಗೋಳ




