ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ಒಂದು ಬಾರಿ ಮಾತ್ರ ಅನ್ವಯವಾಗುವಂತೆ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳಷ್ಟು ಸಡಿಲಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕ್ರಮದಂತೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಇದ್ದ 35 ವರ್ಷಗಳ ಗರಿಷ್ಠ ವಯೋಮಿತಿ ಇದೀಗ 40 ವರ್ಷಕ್ಕೆ ಹೆಚ್ಚಳವಾಗಿದೆ. ಹಿಂದುಳಿದ ವರ್ಗಗಳಿಗೆ 38ರಿಂದ 43 ವರ್ಷಕ್ಕೆ ಹಾಗೂ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40ರಿಂದ 45 ವರ್ಷಕ್ಕೆ ವಯೋಮಿತಿ ವಿಸ್ತರಣೆ ಮಾಡಲಾಗಿದೆ.
ಒಳ ಮೀಸಲಾತಿ ಹಾಗೂ ಇತರ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಿದ್ದರಿಂದ ಅನೇಕ ಉದ್ಯೋಗಾಕಾಂಕ್ಷಿಗಳು ವಯೋಮಿತಿ ಮೀರಿದ ಕಾರಣ ಸರ್ಕಾರಿ ಉದ್ಯೋಗದಿಂದ ವಂಚಿತರಾಗಿದ್ದರು. ಈ ಹಿನ್ನೆಲೆ ವಯೋಮಿತಿ ಸಡಿಲಿಕೆ ಮಾಡುವಂತೆ ಅಭ್ಯರ್ಥಿಗಳಿಂದ ನಿರಂತರ ಒತ್ತಾಯ ಕೇಳಿಬರುತ್ತಿತ್ತು.
ಈ ಮೊದಲು 2025ರ ಸೆಪ್ಟೆಂಬರ್ 29ರಂದು ಸರ್ಕಾರ 3 ವರ್ಷ ವಯೋಮಿತಿ ಸಡಿಲಿಕೆ ಆದೇಶ ನೀಡಿತ್ತು. ಆದರೆ ಅದನ್ನು 5 ವರ್ಷಗಳಿಗೆ ಹೆಚ್ಚಿಸುವಂತೆ ವ್ಯಾಪಕ ಒತ್ತಡಗಳು ಬಂದ ಹಿನ್ನೆಲೆಯಲ್ಲಿ, ಕಳೆದ ಸಚಿವ ಸಂಪುಟ ಸಭೆಯಲ್ಲಿ ಒಂದು ಬಾರಿ ಮಾತ್ರ ಅನ್ವಯವಾಗುವಂತೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ತೀರ್ಮಾನಿಸಲಾಗಿತ್ತು.
ಈಗ ಸಚಿವ ಸಂಪುಟದ ನಿರ್ಧಾರದಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಇದರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶ ದೊರಕಿದೆ.
ವರದಿ : ಲಾವಣ್ಯ ಅನಿಗೋಳ




