ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಹಾಗೂ ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಹೊಸ ತಿರುವು ಕಾಣಿಸಿಕೊಂಡಿದೆ. ಐಟಿ ಅಧಿಕಾರಿಗಳ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲೇ ಸಿಜೆ ರಾಯ್ ತಮ್ಮ ಕಚೇರಿಯಲ್ಲಿ ಲೈಸೆನ್ಸ್ ಪಿಸ್ತೂಲ್ ಬಳಸಿ ಗುಂಡು ಹಾರಿಸಿಕೊಂಡು ಜೀವ ಅಂತ್ಯಗೊಳಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಾವಿಗೆ ಕೇರಳ ವಿಧಾನಸಭಾ ಚುನಾವಣೆಯೊಂದಿಗೆ ನಂಟಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಮುಂಬರುವ ಏಪ್ರಿಲ್ ತಿಂಗಳಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಸಿಜೆ ರಾಯ್ ಹಣಕಾಸು ನೆರವು ನೀಡುತ್ತಿದ್ದಾರೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಕೇರಳ ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳು ಹಾಗೂ ಆಸ್ತಿಗಳ ಮೇಲೆ ಶೋಧ ಕಾರ್ಯ ನಡೆಸಿದ್ದರು.
ಕಳೆದ ಒಂದು ತಿಂಗಳಿನಿಂದಲೇ ಕೇರಳದಲ್ಲಿ ಸಿಜೆ ರಾಯ್ ಅವರ ವ್ಯವಹಾರಗಳು, ಹಣ ವರ್ಗಾವಣೆ ಹಾಗೂ ರಾಜಕೀಯ ನಾಯಕರೊಂದಿಗೆ ಹೊಂದಿದ್ದ ಸಂಪರ್ಕಗಳ ಕುರಿತು ಐಟಿ ಇಲಾಖೆ ನಿಗಾ ವಹಿಸಿತ್ತು ಎನ್ನಲಾಗಿದೆ. ತನಿಖೆಯ ವೇಳೆ ಕೇರಳದಲ್ಲಿ ಕಾನ್ಫಿಡೆಂಟ್ ಗ್ರೂಪ್ ನಿರ್ಮಿಸಿದ್ದ ಫ್ಲ್ಯಾಟ್‌ಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ದಾಖಲೆಗಳು ಪತ್ತೆಯಾಗಿವೆ.
ಇದಲ್ಲದೆ ಬಹುತೇಕ ಹಣ ವ್ಯವಹಾರಗಳು ನಗದು ರೂಪದಲ್ಲೇ ನಡೆದಿರುವುದು ಐಟಿ ಅಧಿಕಾರಿಗಳ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ತೆರಿಗೆ ತಪ್ಪಿಸುವ ಉದ್ದೇಶವೇ ಅಥವಾ ಚುನಾವಣಾ ಫಂಡಿಂಗ್‌ಗೆ ಈ ಹಣ ಬಳಕೆಯಾಗಿತ್ತೇ ಎಂಬ ಅಂಶವನ್ನು ಐಟಿ ಇಲಾಖೆ ಆಳವಾಗಿ ಪರಿಶೀಲಿಸುತ್ತಿದೆ.
ಸಿಜೆ ರಾಯ್ ಇತ್ತೀಚೆಗೆ ಯಾರ ಜೊತೆ ಸಂಪರ್ಕ ಹೊಂದಿದ್ದರು, ಯಾವ ರಾಜಕೀಯ ಹಾಗೂ ಉದ್ಯಮ ವಲಯದ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸುತ್ತಿದ್ದರು ಎಂಬ ಎಲ್ಲ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೇರಳ ಐಟಿ ಇಲಾಖೆ ಹಾಗೂ ಬೆಂಗಳೂರು ಪೊಲೀಸರ ಸಂಯುಕ್ತ ತನಿಖೆಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ




