ಅಸಹಾಯಕ ಮುಖ್ಯಮಂತ್ರಿ ಎಂಬ ವಿಪಕ್ಷದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ರಾಜ್ಯ ಸರ್ಕಾರಕ್ಕೆ ಸಂವೇದನೆ ಇಲ್ಲ, ಸಿಎಂ ಅಸಹಾಯಕ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ,
ಒಮ್ಮೊಮ್ಮೆ ಅಸಹಾಯಕತೆ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಸತ್ಯದ ಎದುರು ಸತ್ಯವೇ ಅಸಹಾಯಕವಾಗುತ್ತದೆ ಎಂದು ಹೇಳಿದರು.
ರಾಜ್ಯಪಾಲರು ಸದನದಲ್ಲಿ ಪೂರ್ಣ ಭಾಷಣ ಓದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಭಾಷಣದಲ್ಲಿ ‘ಜೈ ಸಂವಿಧಾನ’ ಎಂದು ಬರೆದಿದ್ದೆವು. ಆದರೆ ರಾಜ್ಯಪಾಲರು ‘ಜೈ ಹಿಂದ್’ ಹಾಗೂ ‘ಜೈ ಕರ್ನಾಟಕ’ ಎಂದಷ್ಟೇ ಓದಿದರು. ರಾಷ್ಟ್ರಗೀತೆ ನಂತರ ಹೊರಹೋಗಬೇಕಾಗಿತ್ತು. ಆದರೆ ‘ಜೈ ಸಂವಿಧಾನ’ ಓದದೇ ಹಾಗೂ ರಾಷ್ಟ್ರಗೀತೆಗೆ ನಿಲ್ಲದೇ ತೆರಳಿದ್ದಾರೆ” ಎಂದು ವಿವರಿಸಿದರು.
ನಮ್ಮ ಸಿದ್ಧಾಂತಕ್ಕೆ ವಿರೋಧ ಇರಬಹುದು. ಆದರೆ ಸಂವಿಧಾನಕ್ಕೆ ವಿರೋಧ ಮಾಡುವ ಹಕ್ಕು ಯಾರಿಗೂ ಇಲ್ಲ. ಸಂವಿಧಾನವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ರಾಜ್ಯಪಾಲರು ಮೂಲತಃ ಒಳ್ಳೆಯವರು. ನಾವು ರಾಜ್ಯಪಾಲರ ವಿರುದ್ಧವಲ್ಲ, ಕೇಂದ್ರ ಸರ್ಕಾರದ ವಿರುದ್ಧ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಅಭಿವೃದ್ಧಿಗೆ ‘ಮನರೇಗಾ ಸಂಜೀವಿನಿ’ ಎಂದು H.D. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ಹೇಳಿದ್ದರು. ಆದರೆ ಈಗ ಅದನ್ನೇ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಬಳಿಕ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವರದಿ : ಲಾವಣ್ಯ ಅನಿಗೋಳ




