ಚುನಾವಣೆಗೆ ಸ್ಪರ್ಧಿಸೋಕೇ ಮಗಳನ್ನೇ ಕೊಂದ ಪಾಪಿ ತಂದೆ!

ಚುನಾವಣೆಗೆ ಸ್ಪರ್ಧಿಸಲು ಎರಡು ಮಕ್ಕಳ ನಿಯಮ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಆರು ವರ್ಷದ ಮಗಳನ್ನೇ ಕೊಂದ ಪಾಪಿ ತಂದೆಯೊಬ್ಬನನ್ನು ಪೊಲೀಸರು ಬಂಧಿಸಿರುವ ಭೀಕರ ಘಟನೆ ಮಹಾರಾಷ್ಟ್ರ–ತೆಲಂಗಾಣ ಗಡಿಭಾಗದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯಾದ ಬಾಲಕಿಯನ್ನು ಪ್ರಾಚಿ (6) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ.

ಆರೋಪಿ ಮಹಾರಾಷ್ಟ್ರದ ನಾಂದೇಡ್, ಮುಖೇಡ್ ನ ಕೆರೂರ್ ಗ್ರಾಮದ ನಿವಾಸಿಯಾಗಿದ್ದು, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗೆ ಮೂರು ವರ್ಷದ ಗಂಡು ಮಗು ಹಾಗೂ ಆರು ವರ್ಷದ ಅವಳಿ ಹೆಣ್ಣು ಮಕ್ಕಳು ಇದ್ದ ಕಾರಣ, ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ‘ಎರಡು ಮಕ್ಕಳ ನಿಯಮ’ದಿಂದ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗಿದ್ದ

ಇದರಿಂದ ಬೇಸರಗೊಂಡ ಪಾಂಡುರಂಗ, ಸ್ನೇಹಿತ ಹಾಗೂ ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆ ಜೊತೆ ಚರ್ಚಿಸಿ ಅವಳಿ ಮಕ್ಕಳಲ್ಲಿ ಹಿರಿಯಳಾದ ಪ್ರಾಚಿಯನ್ನು ಎಲ್ಲಾದರೂ ಬಿಟ್ಟು ಬರಲು ಯೋಜಿಸಿದ್ದ. ಆದರೆ, ಬಾಲಕಿ ಮತ್ತೆ ಮನೆಗೆ ವಾಪಸ್ ಬಂದರೆ ತೊಂದರೆ ಆಗಬಹುದು ಎಂಬ ದುರುದ್ದೇಶದಿಂದ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಸಮೀಪದ ನಿಜಾಮ್ ಸಾಗರ್ ಕಾಲುವೆಗೆ ತಳ್ಳಿ ಕೊಲೆ ಮಾಡಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ.

ಕೆಲವು ದಿನಗಳ ಹಿಂದೆ ಯೆಡಪಲ್ಲಿ ಬಳಿ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ನಿಜಾಮಾಬಾದ್ ಪೊಲೀಸರು ಬಾಲಕಿಯ ತಂದೆಯನ್ನು ವಿಚಾರಣೆ ನಡೆಸಿದಾಗ, ಮೊದಲಿಗೆ ಮಗಳು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ನಂತರ ತೀವ್ರ ವಿಚಾರಣೆಯಲ್ಲಿ ಮಗಳನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಾಂಡುರಂಗ ಹಾಗೂ ಗ್ರಾಮದ ಸರಪಂಚ್ ಗಣೇಶ್ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಲುವೆ ಬಳಿ ಕೆಲಸ ಮಾಡುತ್ತಿದ್ದ ರೈತರಿಗೆ ನೀರಿಗೆ ಏನೋ ಬಿದ್ದ ಶಬ್ದ ಕೇಳಿ ಪರಿಶೀಲಿಸಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೋ ವೈರಲ್ ಆಗಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author