ಭ್ರೂಣಾವಸ್ಥೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂಬ ಉದ್ದೇಶದೊಂದಿಗೆ ಮಧ್ಯಪ್ರದೇಶ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಗರ್ಭ ಸಂಸ್ಕಾರ’ ಎಂಬ ವಿಶೇಷ ಕೊಠಡಿಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಇಂದೋರ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮೋಹನ್ ಯಾದವ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಜೊತೆಗೆ ರಾಜ್ಯದ ಎಲ್ಲಾ ಆರೋಗ್ಯ ವಿಶ್ವವಿದ್ಯಾಲಯಗಳಲ್ಲಿ ಗರ್ಭ ಸಂಸ್ಕಾರ ಪದ್ಧತಿಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು. ಈ ಸಂಬಂಧ ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಈ ಹೊಸ ಯೋಜನೆಯಡಿ, ಹುಟ್ಟಲಿರುವ ಮಗುವಿನ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸುವ ಉದ್ದೇಶದಿಂದ ಗರ್ಭಿಣಿಯರಿಗೆ ಸಾಂಪ್ರದಾಯಿಕ ಭಾರತೀಯ ಪದ್ಧತಿ ಆಧಾರಿತ ಪ್ರಸವಪೂರ್ವ ಆರೈಕೆಯನ್ನು ಈ ವಿಶೇಷ ಕೊಠಡಿಗಳಲ್ಲಿ ಒದಗಿಸಲಾಗುತ್ತದೆ.
‘ಗರ್ಭ’ ಎಂದರೆ ಗರ್ಭಕೋಶ, ‘ಸಂಸ್ಕಾರ’ ಎಂದರೆ ಮೌಲ್ಯಗಳು. ಮಗು ಗರ್ಭದಲ್ಲಿರುವಾಗಲೇ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವ ಪ್ರಕ್ರಿಯೆಯೇ ಗರ್ಭ ಸಂಸ್ಕಾರ. ಈ ವಿಧಾನ ಮಗು ಎರಡು ವರ್ಷ ವಯಸ್ಸಾಗುವವರೆಗೂ ಮುಂದುವರಿಯುತ್ತದೆ ಎಂಬ ನಂಬಿಕೆಯಿದೆ.
ಈ ಪದ್ಧತಿಯಡಿ ಗರ್ಭಿಣಿಯರನ್ನು ಧರ್ಮಗ್ರಂಥಗಳ ಪಠಣ, ಧನಾತ್ಮಕ ಚಿಂತನೆ ಹಾಗೂ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತದೆ.
ವರದಿ : ಲಾವಣ್ಯ ಅನಿಗೋಳ




