ಸದನಕ್ಕೆ ಹಾಜರಾಗದ ಬಿಜೆಪಿ ಸದಸ್ಯ ಸಿ.ಟಿ. ರವಿ ಅಮಾನತು

ಸಭಾಪತಿ ಆದೇಶಕ್ಕೆ ಗೌರವ ನೀಡದೇ ಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ. ಈ ಕುರಿತು ಸದನದಲ್ಲಿ ಸ್ಪಷ್ಟನೆ ನೀಡಿದ ಸಭಾಪತಿ ಹೊರಟ್ಟಿ, ವಿಪಕ್ಷ ನಾಯಕರು ಹಾಗೂ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕರಿಗೆ ರಾತ್ರಿ 8 ಗಂಟೆಯೊಳಗೆ ಸಿ.ಟಿ. ರವಿ ಅವರನ್ನು ಸದನಕ್ಕೆ ಕರೆತರಲು ಸೂಚನೆ ನೀಡಿದೆ.

ಆದರೆ ಸಭಾಪತಿಯ ಆದೇಶವನ್ನು ಅವರು ಪಾಲಿಸಿಲ್ಲ. ಆದ್ದರಿಂದ ನಿಯಮಾನುಸಾರ ಅಮಾನತು ವಿಧಿಸಲಾಗುತ್ತಿದೆ ಎಂದು ಘೋಷಿಸಿದರು. ಸಭಾಪತಿಯ ಈ ಆದೇಶದೊಂದಿಗೆ ಸಿ.ಟಿ. ರವಿ ಅವರನ್ನು ಒಂದು ದಿನದ ಮಟ್ಟಿಗೆ ವಿಧಾನಪರಿಷತ್ ಕಾರ್ಯಕಲಾಪಗಳಿಂದ ಅಮಾನತುಗೊಳಿಸಲಾಯಿತು.

ಇತ್ತ, ಇಷ್ಟು ದಿನ ಸಪ್ಪೆಯಾಗಿದ್ದ ಕರ್ನಾಟಕ ಬಿಜೆಪಿ ಇದೀಗ ಕೆರಳಿ ನಿಂತಿದೆ. ಅಬಕಾರಿ ಹಗರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ತೀವ್ರ ಹೋರಾಟಕ್ಕೆ ಇಳಿದಿದೆ. ಇದೇ ವಿಚಾರ ಅಧಿವೇಶನದಲ್ಲಿ ಭಾರೀ ಸದ್ದು ಮಾಡಿದೆ. ಕಳೆದ ಎರಡೂವರೆ ವರ್ಷಗಳಿಂದ ತುಸು ಮೌನದಲ್ಲಿದ್ದ ರಾಜ್ಯ ಬಿಜೆಪಿ ನಾಯಕರು, ಹಾಲಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಆಕ್ರಮಕವಾಗಿ ಧ್ವನಿ ಎತ್ತಿದ್ದಾರೆ.

ಅಬಕಾರಿ ಹಗರಣವಾಗಲಿ, ಹೇಟ್ ಸ್ಪೀಚ್ ವಿಚಾರವಾಗಲಿ – ಪ್ರತೀ ವಿಷಯದಲ್ಲೂ ಸರ್ಕಾರದ ಲೋಪದೋಷಗಳನ್ನು ಬೊಟ್ಟು ಮಾಡಿ ತೋರಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.ಸರ್ಕಾರದ ವಿರುದ್ಧ ತೀವ್ರ ಪ್ರತಿರೋಧ ತೋರುತ್ತಿರುವುದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಮಾತ್ರವಲ್ಲ.

ಇವರಿಗಿಂತ ಹೆಚ್ಚಾಗಿ ಬಿಜೆಪಿಯ ಮೂವರು ಸೀನಿಯರ್ ನಾಯಕರು ಸದನದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿದ್ದಾರೆ. ಈ ಮೂವರು ನಾಯಕರ ಆಕ್ರಮಕ ನಿಲುವಿನ ಹಿಂದೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ವರದಿ : ಲಾವಣ್ಯ ಅನಿಗೋಳ

About The Author