ಚುನಾವಣೆಯಲ್ಲಿ ಗೆದ್ದು ಬಿಗಿದ BJP; ಉದ್ಧವ್ ಬಣಕ್ಕೆ ತೀವ್ರ ಮುಖಭಂಗ!

ದೇಶದ ಶ್ರೀಮಂತ ನಗರಪಾಲಿಕೆ ಎಂದೇ ಖ್ಯಾತಿ ಪಡೆದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಬಿಜೆಪಿ ಮೇಯರ್‌ ಸ್ಥಾನ ಪಡೆದಿದೆ. ಬಿಜೆಪಿಯ ರಿತು ತಾವ್ಡೆ ಅವರನ್ನು ಮೇಯರ್‌ ಆಗಿ ಹಾಗೂ ಶಿವಸೇನೆಯ ಸಂಜಯ್ ಘಡಿಯನ್ನ ಉಪಮೇಯರ್‌ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಬೃಹನ್ಮುಂಬೈ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್‌ ಸ್ಥಾನ ಸಿಕ್ಕ ದಾಖಲೆ ನಿರ್ಮಾಣವಾಗಿದೆ.

ಮತ್ತೊಂದೆಡೆ, ಸುಮಾರು ಎರಡೂವರೆ ದಶಕಗಳ ಬಳಿಕ ಉದ್ಧವ್ ಠಾಕ್ರೆ ಬಣದ ಶಿವಸೇನೆ ಪಾಲಿಕೆ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದೆ. ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದ ಕೊನೆಯ ದಿನ ಬಿಜೆಪಿ ಹಾಗೂ ಶಿಂಧೆ ಬಣದ ಶಿವಸೇನೆ ಅಭ್ಯರ್ಥಿಗಳೇ ನಾಮಪತ್ರ ಸಲ್ಲಿಸಿದ್ದರಿಂದ, ಎರಡೂ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಜನವರಿ 28ರಂದು ನಡೆದ ಬೃಹನ್ಮುಂಬೈ ಪಾಲಿಕೆ ಚುನಾವಣೆಯಲ್ಲಿ ಒಟ್ಟು 228 ಸ್ಥಾನಗಳಲ್ಲಿ ಬಿಜೆಪಿ–ಶಿವಸೇನೆ ಒಕ್ಕೂಟ ಮಹಾಯುತಿ ಮೈತ್ರಿ 144 ಕ್ಷೇತ್ರಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿತ್ತು. ಚುನಾವಣೆಯ ಬಳಿಕ ಮೇಯರ್ ಹುದ್ದೆಯನ್ನು 50–50 ಆಧಾರದಲ್ಲಿ ಹಂಚಿಕೊಳ್ಳಬೇಕು ಎಂದು ಶಿಂಧೆ ಬಣ ಪಟ್ಟು ಹಿಡಿದಿದೆ ಎಂಬ ವರದಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಶಿಂಧೆ ಬಣದ ಕಾರ್ಪೊರೇಟರ್‌ಗಳನ್ನು ಹೋಟೆಲ್‌ಗೆ ಸ್ಥಳಾಂತರಿಸಲಾಗಿತ್ತು.

ಆದರೆ ನಂತರ ಯಾವುದೇ ಬಹಿರಂಗ ಗೊಂದಲವಿಲ್ಲದೇ ಉಭಯ ಪಕ್ಷಗಳು ಸಮನ್ವಯ ಸಾಧಿಸಿ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿಗಳನ್ನು ಘೋಷಿಸಿ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿವೆ.

About The Author