Political News: ಇಂದು ಸಂಸದ ತೇಜಸ್ವಿ ಸೂರ್ಯ ಮೆಟ್ರೋ ಪ್ರಯಾಣ ದರ ಖಂಡಿಸಿ, ಪ್ರತಿಭಟನೆ ನಡೆಸಿದ್ದು, ಕೆಲ ಸಮಯ ಅವರನ್ನು ಬಂಧಿಸಲಾಗಿತ್ತು. ಬಿಜೆಪಿಯ ಹಲವು ನಾಯಕರು ಈ ಬಂಧನ ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಹದಗೆಟ್ಟಿರೋ ಆರ್ಥಿಕ ಪರಿಸ್ಥಿತಿ ಮತ್ತು ಜನರಿಗೆ ಹೊರೆಯಾಗಿರೋ #MetroFares ಬಗ್ಗೆ ಸತ್ಯ ಮಾತನಾಡುತ್ತಿರುವ ಒಬ್ಬ ಚುನಾಯಿತ ನಾಯಕನನ್ನು ಬಂಧಿಸಿ, ಬಲಪ್ರಯೋಗ ಮಾಡುವುದಾದರೆ, ಇನ್ನು ಜನಸಾಮಾನ್ಯರ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲಿ ಸರ್ಕಾರ ಅಂದ್ರೆ ಬರೀ ದ್ವೇಷದ ರಾಜಕಾರಣ ಅನ್ನೋ ಹಾಗಾಗಿದೆ. ಪ್ರಶ್ನೆಗಳಿಗೆ ಇಲ್ಲಿ ಕೈಕೋಳಗಳೇ ಉತ್ತರ, ಸತ್ಯಕ್ಕೆ ಇಲ್ಲಿ ಬೆದರಿಕೆಗಳೇ ಪ್ರತಿಕ್ರಿಯೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ನಾಯಕರನ್ನ ಜೈಲಿಗೆ ಹಾಕಬಹುದು, ಆದರೆ ವಾಸ್ತವಗಳನ್ನಲ್ಲ. ಧ್ವನಿಗಳನ್ನ ಬಂಧಿಸಬಹುದು, ಆದರೆ ಸತ್ಯವನ್ನಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಬಯಲಿಗೆಳೆಯುವುದನ್ನು ಬಿಜೆಪಿ ನಿಲ್ಲಿಸಲ್ಲ. ಬೆಂಗಳೂರನ್ನು ಬೆದರಿಸಿ ಮೌನಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.




