ಕುಷ್ಟಗಿಯಲ್ಲಿ ಕಂಗೊಳಿಸಿದ ಕೇಸರಿ ಸಂಭ್ರಮ

ಹಿಂದೂ ಸಮ್ಮೇಳನ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ನಡೆದ ಭವ್ಯ ಶೋಭಾಯಾತ್ರೆ ಗಮನ ಸೆಳೆಯಿತು. ಪಟ್ಟಣದ ಶ್ರೀ ಮದ್ಧಾನೇಶ್ವರ ಮಠದಿಂದ ಸಂಜೆ ಆರಂಭಗೊಂಡ ಶೋಭಾಯಾತ್ರೆ ಮೆರವಣಿಗೆ ಪಟ್ಟಣದ ಕೋಕಿಲ ಸರ್ಕಲ್, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ, ಭಕ್ತ ಕನಕದಾಸ ವೃತ್ತ ಮಾರ್ಗವಾಗಿ ಶಾಖಾಪೂರ ರಸ್ತೆ ಬಳಿಯ ವಾಸವಿ ಶ್ರೀ ದೇವಸ್ಥಾನದ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಗೆ ತಲುಪಿತು.

ತೆರೆದ ಸಾರೋಟಿನಲ್ಲಿ ಭಾರತಾಂಬೆಯ ಭಾವಚಿತ್ರ, ಛತ್ರಪತಿ ಶಿವಾಜಿ ಮಹೋರಾಜರ ಛದ್ಮವೇಷದಲ್ಲಿ ಯುವಕ ಸೇರಿದಂತೆ ಜೋಡೆತ್ತಿನ ಬಂಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷಧಾರಿ ಯುವಕರು ಮತ್ತು ವಿವಿಧ ಭಜನಾ ಮಂಡಳಿಗಳು, ಡೊಳ್ಳು ಕುಣಿತ, ಚಂಡೆ ವ್ಯಾದ್ಯ, ಭಾವಸಾರ ಬಂಧು ಸಮಾಜದವರಿಂದ ಭಜನೆ, ವಿಪ್ರ ಸಮಾಜದ ಮಹಿಳೆಯರು ಸೇರಿದಂತೆ ವಿವಿಧ ಸಮುದಾಯಗಳ ಮಹಿಳೆಯರು ಕೇಸರಿ ಸೀರೆ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬಿಳಿ ಉಡುಪು ಕೇಸರಿ ವಸ್ತ್ರ ಧರಿಸಿದ ಯುವಕರು ಕೈಯಲ್ಲಿ ಭಗವಾನ್ ಧ್ವಜ ಪ್ರದರ್ಶನ ಜೊತೆಗೆ ಲಂಬಾಣಿ ಸಮುದಾಯದ ಮಹಿಳೆಯರ ಸಾಂಪ್ರದಾಯಿಕ ನೃತ್ಯ ಸಾರ್ವಜನಿಕರ ಗಮನ ಸೆಳೆಯಿತು. ಯಾತ್ರೆಯಲ್ಲಿ ಶಾಸಕ ದೊಡ್ಡನಗೌಡ ಎಚ್. ಪಾಟೀಲ್, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಶೋಭಾ ಯಾತ್ರೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ವರದಿ : ಲಾವಣ್ಯ ಅನಿಗೋಳ

About The Author