ಜಿ.ಪಂ ಕಚೇರಿಯಲ್ಲಿ ಸಿಬ್ಬಂದಿ–ಗ್ರಾಮಸ್ಥನ ನಡುವೆ ಗಲಾಟೆ!

ಕೊಪ್ಪಳ ಜಿಲ್ಲೆಯ ಶಿವಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಗ್ರಾಮಸ್ಥನ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಸಮಸ್ಯೆಯ ಕುರಿತು ವಿಡಿಯೋ ಮಾಡುತ್ತಿದ್ದ ಗ್ರಾಮಸ್ಥನಿಗೆ ಪಂಚಾಯಿತಿ ಸಿಬ್ಬಂದಿ ಅವಹೇಳನಕಾರಿ ಮಾತುಗಳನ್ನಾಡಿದರೆಂಬ ಆರೋಪ ಕೇಳಿಬಂದಿದೆ.

ಗ್ರಾಮಸ್ಥನ ಹೇಳಿಕೆಗೆ ಅನುಸಾರ, ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ತನ್ನ ಖಾಲಿ ನಿವೇಶನದ ಕರಾ ವಸೂಲಿ ತುಂಬಲು ಬಂದಾಗ ಅವರು ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಅಲ್ಲಿದ್ದ ಸಿಬ್ಬಂದಿಯೊಬ್ಬರು ನೀನು ಮಾಡಿರುವ ವಿಡಿಯೋ ಮೀಡಿಯಾ ಅಲ್ಲ. ದುನಿಯಾದವರಿಗೆ ಕೊಡು ಎಂದು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಜೋರಾಗಿ ನಡೆಯಿತು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗ್ರಾಮಸ್ಥರು ಪಂಚಾಯಿತಿ ಸಿಬ್ಬಂದಿಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತ, ಪಂಚಾಯಿತಿ ವಲಯದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಮೇಲಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡುವ ಸಾಧ್ಯತೆ ಇದೆ.
ಈ ಘಟನೆ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಮತ್ತು ಸಾರ್ವಜನಿಕರೊಂದಿಗೆ ನಡೆಸುವ ಸಂವಹನದ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author