ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ತಲೆದೋರಿದೆ. ನೀರಿನ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದ 6ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮಸ್ಥರ ಆರೋಪದ ಪ್ರಕಾರ, ಪೂರೈಕೆ ಆಗುತ್ತಿರುವ ನೀರು ರಕ್ತದಂತೆ ಕೆಂಪು ಬಣ್ಣಕ್ಕೆ ಪರಿವರ್ತನೆಯಾಗಿದ್ದು, ದುರ್ವಾಸನೆ ಬೀರುತ್ತಿದೆ.
ಇದು ಕುಡಿಯುವ ನೀರಲ್ಲ, ವಿಷದ ನೀರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿಯ ವಾಸನೆ ಇರುವ ನೀರನ್ನು ಬಳಸುವುದರಿಂದ ಮಕ್ಕಳು ಹಾಗೂ ಗ್ರಾಮಸ್ಥರು ಆನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ದುಡ್ಡು ಕೊಟ್ಟು ಶುದ್ಧ ನೀರು ಪಡೆಯಲು ಸಾಧ್ಯವಿಲ್ಲದ ಬಡ ಕುಟುಂಬಗಳು ಇದೇ ನೀರನ್ನು ಬಳಸಲು ನಿರ್ಬಂಧಿತವಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಮೂರು ತಿಂಗಳು ಕಳೆದರೂ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ. ವಿಷಯ ತಿಳಿದಿದ್ದರೂ ಸಂಬಂಧಿತ ಅಭಿವೃದ್ಧಿ ಅಧಿಕಾರಿ ಮೌನ ವಹಿಸಿದ್ದಾರೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಕುಡಿಯುವ ನೀರಿನ ಸಂಕಷ್ಟಕ್ಕೆ ಯಾವುದೇ ಸ್ಪಂದನೆ ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




