ರಾಜ್ಯ ಬೊಕ್ಕಸಕ್ಕೆ ಒತ್ತಡ, ಹಣಕಾಸು ಸಂಕಷ್ಟ?

ಪ್ರಸಕ್ತ 2025–26ನೇ ಆರ್ಥಿಕ ವರ್ಷದ ಬಜೆಟ್ ದಾಖಲೆ ಗಾತ್ರದಲ್ಲಿದ್ದರೂ, ಸರ್ಕಾರದ ಸ್ವಂತ ತೆರಿಗೆ ಆದಾಯ ಸಂಗ್ರಹದಲ್ಲಿ ಖೋತಾ ಕಾಣುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ವಾರ್ಷಿಕ ಗುರಿ ತಲುಪಲು ಮಾರ್ಚ್ ಅಂತ್ಯದೊಳಗೆ ಇನ್ನೂ 48,306 ಕೋಟಿ ರೂ. ಸಂಗ್ರಹ ಅಗತ್ಯವಿದೆ. 4.09 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಸರ್ಕಾರಕ್ಕೆ, ಅಬಕಾರಿ ಹೊರತುಪಡಿಸಿ ಉಳಿದ ಪ್ರಮುಖ ತೆರಿಗೆ ಮೂಲಗಳಿಂದ ಗುರಿ ಸಾಧನೆ ಸವಾಲಾಗುತ್ತಿದೆ.

ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ತೆರಿಗೆಯಿಂದ ಒಟ್ಟಾರೆ ಸುಮಾರು 15,000 ಕೋಟಿ ರೂ. ಆದಾಯ ಕೈತಪ್ಪುವ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸುತ್ತಿವೆ. ತೆರಿಗೆ ಆದಾಯದಲ್ಲಿ ಈ ಕುಸಿತ, ಸರ್ಕಾರದ ವೆಚ್ಚ ನಿರ್ವಹಣೆ ಮತ್ತು ಬಜೆಟ್ ಗಾತ್ರದ ಮೇಲೆ ನೇರ ಪರಿಣಾಮ ಬೀರುವ ಆತಂಕ ಹೆಚ್ಚಿಸಿದೆ.

ಪ್ರಸಕ್ತ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ 83,200 ಕೋಟಿ ರೂ. ವಿನಿಯೋಗಿಸಿರುವುದಾಗಿ ಸರ್ಕಾರ ಹೇಳಿದ್ದರೂ, ಆದಾಯ ತಗ್ಗಿದರೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿತ ಅನಿವಾರ್ಯವಾಗುವ ಸಾಧ್ಯತೆ ಇದೆ. ಅಬಕಾರಿ ಇಲಾಖೆಯಿಂದ ಮಾತ್ರ ವಾರ್ಷಿಕ ಗುರಿ ಮೀರುವ ವಿಶ್ವಾಸ ವ್ಯಕ್ತವಾಗಿದೆ. 40,000 ಕೋಟಿ ರೂ. ಗುರಿಯಡಿ ಜನವರಿ ಅಂತ್ಯಕ್ಕೆ 33,371 ಕೋಟಿ ರೂ. ಸಂಗ್ರಹವಾಗಿದೆ.

ಕಳೆದ ಸಾಲಿನ ಜನವರಿ ಅಂತ್ಯದ 29,460 ಕೋಟಿ ರೂ.ಗೆ ಹೋಲಿಸಿದರೆ ಶೇ.13.27ರಷ್ಟು ಬೆಳವಣಿಗೆ ಕಂಡುಬಂದಿದೆ. ಮಾಸಿಕ ಸರಾಸರಿ 3,000 ಕೋಟಿ ರೂ. ಸಂಗ್ರಹದ ಹಿನ್ನೆಲೆ, ಮಾರ್ಚ್ ವೇಳೆಗೆ ಗುರಿ ಮೀರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ವಾಣಿಜ್ಯ ತೆರಿಗೆ ಮೂಲದಿಂದ ಜನವರಿ ಅಂತ್ಯಕ್ಕೆ 90,229 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿಯಿಂದ 66,605 ಕೋಟಿ ರೂ., ಮಾರಾಟ ತೆರಿಗೆಯಿಂದ 22,387 ಕೋಟಿ ರೂ., ವೃತ್ತಿ ತೆರಿಗೆಯಿಂದ 1,236 ಕೋಟಿ ರೂ. ಬಂದಿದೆ.

ಕೇಂದ್ರ ಸರ್ಕಾರ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ಜಾರಿಗೆ ತಂದಿರುವ ಪರಿಣಾಮ, ರಾಜ್ಯಕ್ಕೆ ವಾರ್ಷಿಕ 9,000 ಕೋಟಿ ರೂ. ನಷ್ಟವಾಗುವ ಆತಂಕವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ.
ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ಜನವರಿವರೆಗೆ 20,500 ಕೋಟಿ ರೂ. ಸಂಗ್ರಹವಾಗಿದೆ. ಬಾಕಿ ಎರಡು ತಿಂಗಳಲ್ಲಿ 7,500 ಕೋಟಿ ರೂ. ಸಂಗ್ರಹ ಅಸಾಧ್ಯವೆನಿಸಿದ್ದು, ಸುಮಾರು 3,000 ಕೋಟಿ ರೂ. ಆದಾಯ ಖೋತಾ ಸಂಭವಿಸಬಹುದು ಎಂದು ಇಲಾಖೆ ಮೂಲಗಳು ಹೇಳುತ್ತಿವೆ.

ಮೋಟಾರು ವಾಹನ ತೆರಿಗೆ ಸೇರಿದಂತೆ ಇತರೆ ಮೂಲಗಳಿಂದ 15,000 ಕೋಟಿ ರೂ. ಗುರಿ ನಿಗದಿಯಾಗಿದ್ದರೂ, ಜನವರಿವರೆಗೆ ಕೇವಲ 10,594 ಕೋಟಿ ರೂ. ಸಂಗ್ರಹವಾಗಿದೆ. ಉಳಿದ ಅವಧಿಯಲ್ಲಿ 4,406 ಕೋಟಿ ರೂ. ಸಂಗ್ರಹ ಸವಾಲಾಗಿದ್ದು, ವಾರ್ಷಿಕ ಗುರಿಯಲ್ಲಿ ಸುಮಾರು 2,000 ಕೋಟಿ ರೂ. ಕೊರತೆ ಉಂಟಾಗುವ ಸಾಧ್ಯತೆ ಇದೆ.

ವರದಿ : ಲಾವಣ್ಯ ಅನಿಗೋಳ

About The Author