ಮತ್ತೆ ದೇವಸ್ಥಾನಗಳ ಧ್ವಂಸ; ನಿಲ್ಲದ ಕಿಡಿಗೇಡಿಗಳ ಅಟ್ಟಹಾಸ!

ಗದಗ ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಧ್ವಂಸ ನಡೆದಿರುವ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಶಿಂಗಟಾಲೂರು ಗ್ರಾಮದಲ್ಲಿನ ಇತ್ತೀಚಿನ ಪ್ರಕರಣ ಮಾಸುವ ಮುನ್ನವೇ ಮತ್ತಷ್ಟು ಘಟನೆಗಳು ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಸಮೀಪ ಈ ಘಟನೆಗಳು ಸಂಭವಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಲ್ಲಿಕಾರ್ಜುನಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ಗಾಳಿಬಸವೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗ ಧ್ವಂಸಗೊಂಡಿದೆ.

ಇದೇ ವೇಳೆ ಆದರಳ್ಳಿ ಸಮೀಪದ ದಂಡೇರಿ ಮರಿಯಮ್ಮ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಹಾನಿ ಉಂಟಾಗಿರುವುದು ವರದಿಯಾಗಿದೆ. ಘಟನೆಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವರಾತ್ರಿ ದಿನದಂದು ಶಿಂಗಟಾಲೂರು ಗ್ರಾಮದಲ್ಲಿ ಶಿವಲಿಂಗ, ನಂದಿ ವಿಗ್ರಹ ಹಾಗೂ ಹೊನ್ನತ್ತೆಮ್ಮ ಮೂರ್ತಿಯನ್ನು ಧ್ವಂಸಗೊಳಿಸಿದ್ದ ಘಟನೆ ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ ಎಂದು ತಿಳಿದುಬಂದಿದೆ. ಇದೀಗ ಮತ್ತೇ ಎರಡು ಕಡೆಗಳಲ್ಲಿ ದೇವಸ್ಥಾನ ಧ್ವಂಸ ಘಟನೆಗಳು ವರದಿಯಾಗಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಮುಂಡರಗಿ ಮತ್ತು ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಘಟನೆಗಳ ಕುರಿತು ತನಿಖೆ ಮುಂದುವರಿದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

About The Author