ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ಚನ್ನಹಳ್ಳಿ ತಾಂಡದ ಬಳಿ ಲವ್ ಮ್ಯಾರೇಜ್ ಮಾಡಲು ಬಂದಿದ್ದ ಯುವಕರ ಕಾರು ಅಪಘಾತಕ್ಕೊಳಗಾದ ಘಟನೆ ನಡೆದಿದೆ. ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿಯ ನಿವಾಸಿಗಳಾದ ಇರ್ಪಾನ್, ಚಂದ್ರು ಮತ್ತು ಗುರುರಾಜ್ ಎಂಬ ಮೂವರು ಯುವಕರು, ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಚನ್ನಹಳ್ಳಿ ತಾಂಡಕ್ಕೆ ಆಗಮಿಸಿದ್ದರು.
ಚನ್ನಹಳ್ಳಿ ಪ್ಲ್ಯಾಟ್‌ನ ಯುವತಿಯೊಂದಿಗಿನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ, ಇರ್ಪಾನ್ ಜೊತೆ ಮದುವೆ ಮಾಡಿಸುವ ಯೋಜನೆ ರೂಪಿಸಿದ್ದರೆಂದು ತಿಳಿದುಬಂದಿದೆ. ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುವ ವೇಳೆ, ಕಾರು ಓವರ್ ಸ್ಪೀಡ್‌ನಿಂದ ನಿಯಂತ್ರಣ ತಪ್ಪಿ ಅಪಘಾತಕ್ಕೊಳಗಾಗಿದೆ. ಪರಿಣಾಮವಾಗಿ ಮೂವರು ಯುವಕರಿಗೂ ಗಂಭೀರ ಗಾಯಗಳಾಗಿವೆ.
ಅಪಘಾತದ ನಂತರ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೀರೆಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




