ಬೆಂಗಳೂರು ನಗರದಲ್ಲಿ ಇತ್ತೀಚೆಗೆ BMRCL ವ್ಯಾಪ್ತಿಯ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಟ್ರ್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಭದ್ರತಾ ಕ್ರಮಗಳ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಪ್ರಯಾಣಿಕರು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ಅಳವಡಿಕೆಗೆ ಒತ್ತಾಯಿಸುತ್ತಿದ್ದರೆ, BMRCL ಸದ್ಯ PSD ಡೋರ್ ಬದಲಿಗೆ ಸ್ಟೀಲ್ ಬ್ಯಾರಿಕೇಡ್ ಮತ್ತು ಗೇಟ್‌ಗಳ ಅಳವಡಿಕೆಗೆ ಮುಂದಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಆತ್ಮಹತ್ಯೆ ಸಂಬಂಧಿತ ಪ್ರಕರಣಗಳು ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ, ಪ್ರಮುಖ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲು BMRCL ಕ್ರಮ ಕೈಗೊಂಡಿದೆ. ಮೆಜಸ್ಟಿಕ್ ಮೆಟ್ರೋ ಸ್ಟೇಷನ್, ಆರ್.ವಿ. ರೋಡ್, ಕೆ.ಆರ್.ಪುರ, ಇಂದಿರಾನಗರ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ಸ್ಟೇಷನ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಸ್ಟೀಲ್ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ.
ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಕೆಲವು ಮೆಟ್ರೋ ಪ್ರಯಾಣಿಕರು, PSD ಡೋರ್ ಅಳವಡಿಸಿದರೆ ಮಾತ್ರ ಟ್ರ್ಯಾಕ್ ಪ್ರವೇಶವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಸ್ಟೀಲ್ ಬ್ಯಾರಿಕೇಡ್‌ಗಳಿಂದ ಸೀಮಿತ ಪ್ರಯೋಜನ ಮಾತ್ರ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟು 83 ಮೆಟ್ರೋ ನಿಲ್ದಾಣಗಳ ಪೈಕಿ ಸದ್ಯ ನಾಲ್ಕು ನಿಲ್ದಾಣಗಳಲ್ಲಿ ಸ್ಟೀಲ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ನಿಲ್ದಾಣಗಳಲ್ಲೂ PSD ಡೋರ್ ಅಥವಾ ಶಾಶ್ವತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರು BMRCL ಗೆ ಒತ್ತಾಯಿಸುತ್ತಿದ್ದಾರೆ.
ಇದೇ ವೇಳೆ, ಪಿಂಕ್ ಲೈನ್‌ನ ಕಾಳೇನ ಅಗ್ರಹಾರ – ನಾಗವಾರ ಅಂಡರ್‌ಗ್ರೌಂಡ್ ಮೆಟ್ರೋ ಮಾರ್ಗದಲ್ಲಿ PSD ಡೋರ್ ಅಳವಡಿಕೆಗೆ ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ಇತರ ಮಹಾನಗರಗಳ ಮೆಟ್ರೋ ನಿಲ್ದಾಣಗಳಲ್ಲಿ PSD ಡೋರ್ ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ, ನಮ್ಮ ಮೆಟ್ರೋದಲ್ಲಿ ಸ್ಟೀಲ್ ಬ್ಯಾರಿಕೇಡ್ ಅಳವಡಿಕೆಗೆ ಆದ್ಯತೆ ನೀಡಿರುವುದು ಪ್ರಯಾಣಿಕರ ನಡುವೆ ಚರ್ಚೆಗೆ ಕಾರಣವಾಗಿದೆ. ಸಂಪೂರ್ಣ PSD ಅಳವಡಿಕೆ ಯಾವಾಗ ಆರಂಭವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ




