Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ ಮಾತನಾಡಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿರುವ ಅವರು, ಅಮೆರಿಕಾವು ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದ್ದು. ಒಂದೆಡೆ ಶಾಂತಿ ಮಾತ್ರ ಪಠಿಸುವ ಅಮೆರಿಕಾ ಮತ್ತೊಂದೆಡೆ ಯುದ್ಧ ಮಾಡುತ್ತದೆ. ಅಮೆರಿಕಾ ತದ್ವಿರುದ್ಧವಾದ ನಿಲುವು ಹೊಂದಿದ್ದು, ಇದನ್ನು ಖಂಡಿಸುತ್ತೇನೆ. ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ 30 ಜನರನ್ನು ಸಹ ವಾಪಸ್ಸು ಕರೆತರಲಾಗುವುದು. ದುಬೈ ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈನಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಈ ವೇಳೆ ತಾವು ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಸ್ರೇಲ್ – ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ, ಧೈರ್ಯ ತುಂಬಿದ್ದೇನೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ದುಬೈ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸದ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು, ಬಳಿಕ ಅವರನ್ನು ತವರಿಗೆ ವಾಪಸ್ ಕರೆ ತರುವ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ತುಸು ಸಮಾಧಾನಕರ ವಿಚಾರ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

About The Author