ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ ನಗರದಲ್ಲಿರುವ ಸತ್ಯನಾರಾಯಣ ಅವರ ಮನೆಗೆ ಲೋಕಾಯುಕ್ತ DySP ಸುರೇಶ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದ ತಂಡ ಭೇಟಿ ನೀಡಿತು.

ಬೆಳಗ್ಗೆ 5:30ರ ಸುಮಾರಿಗೆ ಅಧಿಕಾರಿಗಳು ಮನೆಗೆ ಆಗಮಿಸಿದರೂ, ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮನೆಯ ಬಾಗಿಲು ತೆರೆಯದೇ ಅಧಿಕಾರಿಗಳನ್ನು ಸತಾಯಿಸಲಾಗಿದೆ.

ಅಧಿಕಾರಿಗಳು ಮನೆ ಬೆಲ್ ಮಾಡಿ, ಬಾಗಿಲು ಬಡಿದು ಪರಿಶೀಲನೆಗಾಗಿ ಬಾಗಿಲು ತೆರೆಯುವಂತೆ ಸೂಚಿಸಿದರೂ ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ಅಧಿಕಾರಿಗಳು ಆಗಮಿಸಿದ ವೇಳೆ ಮನೆಯಲ್ಲಿ ಲೈಟ್ ಆನ್ ಆಗಿದ್ದರೂ ಬಳಿಕ ಆಫ್ ಆಗಿದೆ. ಅದೇ ವೇಳೆ ಎಸಿ ಕೂಡ ಆನ್ ಆಗಿ ನಂತರ ಆಫ್ ಆಗಿರುವುದು ಗಮನಕ್ಕೆ ಬಂದಿದೆ.

ಸತ್ಯನಾರಾಯಣ ಅವರು ಈ ಹಿಂದೆ ಹಾಸನ ಹೂಡಾ ಹಾಗೂ ನಂತರ ಮಹಾನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸಿದ್ದರೆಂದು ತಿಳಿದುಬಂದಿದೆ. ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author