Political News: ಸರ್ಕಾರದ ವಿರುದ್ಧ ಸಿಟ್ಟಾಗಿ ವಿರೋಧ ಪಕ್ಷಗಳು, ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುವುದು ಹೊಸದೇನಲ್ಲ. ಆದರೆ ಈ ಬಾರಿ, ಅಪರೂಪದಲ್ಲಿ ಅಪರೂಪ ಎಂಬಂತೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್‌ಸಭಾತ್ಯಾಗ ಮಾಡಿದ ಅಚ್ಚರಿಯ ಘಟನೆ ನಡೆದಿದೆ.
ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ, ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ, ಗರಂ ಆದ ಸ್ಪೀಕರ್ ಯು.ಟಿ. ಖಾದರ್, ಸಮಯ ಹೇಳದೆ ಕಲಾಪವನ್ನು ಮುಂದೂಡಿದ್ದಾರೆ. ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್, ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಿಡಿಕಾರಿದ್ರು. ಹಾಗೂ ಕಲಾಪ ಮೊಟಕು ಮಾಡಿ ಪೀಠದಿಂದ ತೆರಳಿದ್ದಾರೆ.
ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ, 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆದಿದೆ. ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರಗಳನ್ನು ಮಂಡಿಸುತ್ತಿದ್ದ ವೇಳೆ, ವಿಪಕ್ಷಗಳ ಸದಸ್ಯರಿಂದ ಟೀಕೆ ವ್ಯಕ್ತವಾಗಿದೆ. ಈ ವೇಳೆ ಸಚಿವರ ವಿರುದ್ಧ ಸ್ಪೀಕರ್ ಖಾದರ್ ಅಸಮಾಧಾನ ಹೊರಹಾಕಿದ್ದಾರೆ.
ಸದನದಲ್ಲಿ ಎಲ್ಲಾ ಶಾಸಕರೂ ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆ ಆಗಲ್ಲ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ಕೊಡಲ್ಲ. 3 ಸಲ ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟ ಕಾರಣ ಕೊಡಬೇಕು. ಅಲ್ಲಿಯವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಖಾರವಾಗಿ ಹೇಳುವ ಮೂಲಕ, ಆಡಳಿತ ಪಕ್ಷಕ್ಕೆ ಸ್ಪೀಕರ್ ಖಾದರ್ ಬಿಸಿ ಮುಟ್ಟಿಸಿದ್ದಾರೆ. ಈ ಬೆನ್ನಲ್ಲೇ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.




