ಬೆಂಗಳೂರು ನಗರದ ವ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ಹೋಗಿ ಕುಟುಂಬವೊಂದು ಅತಿರೇಕದ ಕೃತ್ಯಕ್ಕೆ ಮುಂದಾದ ಘಟನೆ ನಡೆದಿದೆ.
ಒಬ್ಬ ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಕುಟುಂಬಸ್ಥರು ದೊಡ್ಡ ಚೀಲವೊಂದನ್ನು ಹೊತ್ತು ಕೂರಿಯರ್ ಕಚೇರಿಗೆ ಆಗಮಿಸಿದ್ದಾರೆ. ಚೀಲದ ಗಾತ್ರ ಗಮನಿಸಿದ ಸಿಬ್ಬಂದಿ ಅದರೊಳಗೆ ಏನಿದೆ ಎಂದು ಪ್ರಶ್ನಿಸಿದರೂ, ಕುಟುಂಬದವರು ಸ್ಪಷ್ಟ ಉತ್ತರ ನೀಡಲಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್ ತೆರೆಯಲು ಮುಂದಾದರು.
ಪ್ಯಾಕೇಜ್ ತೆರೆಯುತ್ತಿದ್ದಂತೆಯೇ ಅಚ್ಚರಿ ಕಾದಿತ್ತು. ಅದರೊಳಗೆ ವೃದ್ಧ ವ್ಯಕ್ತಿಯೋರ್ವರು ಇರುವುದನ್ನು ಕಂಡ ಸಿಬ್ಬಂದಿ ಬೆಚ್ಚಿಬಿದ್ದರು. ನಂತರ ತಿಳಿದುಬಂದಂತೆ, ಚೀಲದಲ್ಲಿದ್ದವರು ಆ ಕುಟುಂಬದ ಮಹಿಳೆಯ ತಂದೆಯಾಗಿದ್ದು, ಉಸಿರಾಟಕ್ಕೂ ಕಷ್ಟಪಡುತ್ತಿರುವ ಸ್ಥಿತಿಯಲ್ಲಿ ಕಂಡುಬಂದರು.
ಈ ಘಟನೆಗೆ ಕಾರಣ ಕೇಳಿದಾಗ, ಕುಟುಂಬಸ್ಥರು ನೀಡಿದ ಉತ್ತರ ಮತ್ತಷ್ಟು ಅಚ್ಚರಿ ಮೂಡಿಸಿದೆ. ಯುಗಾದಿ ಹಾಗೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಬಸ್ ಟಿಕೆಟ್ ಸಿಗದ ಸಮಸ್ಯೆಯನ್ನು ತೋರಿಸಲು, ‘ಮನುಷ್ಯನನ್ನೇ ಕೂರಿಯರ್ ಮಾಡುವ ಪರಿಸ್ಥಿತಿ ಬಂದಿದೆ’ ಎಂಬ ಸಂದೇಶದೊಂದಿಗೆ ರೀಲ್ಸ್ ಮಾಡಲು ಈ ರೀತಿಯ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಸಿಬ್ಬಂದಿ ಈ ಕೃತ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ, ಕುಟುಂಬಸ್ಥರು ಪಾರ್ಸೆಲ್ ಸ್ವೀಕರಿಸುವಂತೆ ಒತ್ತಾಯಿಸಿದರೆಂದು ತಿಳಿದುಬಂದಿದೆ. ಬಳಿಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕುಟುಂಬಸ್ಥರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚನೆ ಮಾಡಿದ ಹಿನ್ನೆಲೆಯಲ್ಲಿ, ಪೊಲೀಸರು ಗಂಭೀರ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳ ಹುಚ್ಚು ಯಾವ ಮಟ್ಟಿಗೆ ಹೋಗಬಹುದು ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
ವರದಿ : ಲಾವಣ್ಯ ಅನಿಗೋಳ




