ಕಸದ ರಾಶಿಯಲ್ಲಿ ಶವ ಪತ್ತೆ; ತನಿಖೆಯಲ್ಲಿ ಚಾಲಕನ ಕ್ರೂರ ಕೃತ್ಯ ಬಹಿರಂಗ!

ಬೆಂಗಳೂರಿನ ಕೆಂಗೇರಿಯ ಕಸದ ರಾಶಿಯಲ್ಲಿ ಮಹಿಳೆಯ ಶವ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಯಾರೋ ಅಪರಿಚಿತರು ಕೊಲೆಗೈದಿದ್ದಾರೆ ಎನ್ನುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ರು. ಆದ್ರೆ ಇದು ಕೊಲೆಯಲ್ಲ, ಮಹಿಳೆಯನ್ನ ಆಟೋ ಚಾಲಕ ಆಸ್ಪತ್ರೆ ಕರೆದೊಯ್ಯುವ ಬದಲು ಕಸದ ರಾಶಿಗೆ ಬಿಸಾಡಿ ಹೋಗಿದ್ದ ಎನ್ನುವ ವಿಚಾರ ತನಿಖೆಯಿಂದ ಬಯಲಾಗಿದೆ.

ಮೊದಲಿಗೆ ಈ ಘಟನೆ ಕೊಲೆ ಎಂದು ಶಂಕಿಸಲಾಗಿದ್ದರೂ, ಪೊಲೀಸ್ ತನಿಖೆಯಲ್ಲಿ ಇದು ಅಪಘಾತ ಪ್ರಕರಣವಾಗಿದ್ದು, ಮಾನವೀಯತೆ ಕಳೆದುಕೊಂಡ ಘಟನೆ ಎಂದು ಬಯಲಾಗಿದೆ. ಮೃತ ಮಹಿಳೆಯನ್ನು ಕೆಂಪಮ್ಮ (50) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಅವರು ರಸ್ತೆ ದಾಟುತ್ತಿದ್ದ ವೇಳೆ ಆಟೋ ಒಂದು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ನಂತರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದ ಆಟೋ ಚಾಲಕ, ಆಕೆಯನ್ನು ಚಿಕಿತ್ಸೆಗಾಗಿ ಸಾಗಿಸುವ ಬದಲು, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರ ಸಮೀಪದ ರಸ್ತೆ ಬದಿಯ ಕಸದ ರಾಶಿಗೆ ಎಸೆದು ಪರಾರಿಯಾಗಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಘಟನೆಯ ನಂತರ ಸ್ಥಳೀಯರು ಕಸದ ರಾಶಿಯಲ್ಲಿ ಮಹಿಳೆಯ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಪ್ರಕರಣವನ್ನು ಕೊಲೆ ಎಂದು ಶಂಕಿಸಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ, ಅಪಘಾತ ನಡೆದಿದ್ದು ಹಾಗೂ ನಂತರ ಆಟೋ ಚಾಲಕ ಶವವನ್ನು ಕಸದ ರಾಶಿಗೆ ಎಸೆದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಮೃತದೇಹದ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಮಹಿಳೆಯ ಗುರುತು ದೃಢಪಟ್ಟಿದೆ. ಸದ್ಯ ಪರಾರಿಯಾಗಿರುವ ಆಟೋ ಚಾಲಕನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸ್ಥಳದಲ್ಲಿ ಪೊಲೀಸರು ಕಟ್ಟು ನಿಟ್ಟಿನ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author