Davanagere: ಶಾಸಕ ಪ್ರದೀಪ್ ಈಶ್ವರ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಪೊರಕೆ ಎಸೆದು ಆಕ್ರೋಶ

Davanagere: ದಾವಣಗೆರೆ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಗಳ ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಜ್ವಾಲೆ ಸ್ಫೋಟಗೊಂಡಿದೆ.

ಬಿಜೆಪಿ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪ್ರದೀಪ್ ಈಶ್ವರ್ ವಿರುದ್ಧ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರ ನಾಮಪತ್ರ ಸಲ್ಲಿಕೆ ವೇಳೆ ನಗರಕ್ಕೆ ಆಗಮಿಸಿದ್ದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಬಳಸಿದ್ದ ಶಬ್ದಗಳು ಈಗ ಕಿಚ್ಚು ಹಚ್ಚಿವೆ.

ಈ ಅವಹೇಳನಕಾರಿ ಮಾತಿಗೆ ಕೆರಳಿದ್ದ ಬಿಜೆಪಿ ಮುಖಂಡರು, ತಾಕತ್ತಿದ್ದರೆ ದಾವಣಗೆರೆಗೆ ಬರುವಂತೆ ಶಾಸಕರಿಗೆ ಬಹಿರಂಗ ಸವಾಲು ಎಸೆದಿದ್ದರು. ಈ ಸವಾಲನ್ನು ಸ್ವೀಕರಿಸಿದ್ದ ಶಾಸಕ ಪ್ರದೀಪ್ ಈಶ್ವರ್, ಶನಿವಾರ ಬಿಜೆಪಿ ಕಾರ್ಯಾಲಯದ ಮುಂಭಾಗದಿಂದಲೇ ಪ್ರಚಾರ ಆರಂಭಿಸುವುದಾಗಿ ಘೋಷಿಸಿದ್ದರು.

ನುಡಿದಂತೆಯೇ ಶನಿವಾರ ಪ್ರಚಾರಕ್ಕೆ ಪ್ರದೀಪ್ ಈಶ್ವರ್ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಶಾಸಕರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಪೊರಕೆ ಎಸೆದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರದೀಪ್ ಈಶ್ವರ್ ಒಬ್ಬ ಹುಚ್ಚ ಎಂದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಜಿಲ್ಲೆಯ ಶಾಂತಿಯುತ ವಾತಾವರಣ ಕೆಡಿಸಲು ಶಾಸಕರು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

About The Author