Davanagere: ಸಿಎಂ ಮಂಡಿಸಿದ ಬಜೆಟ್ ಯಾವ ಕ್ಷೇತ್ರಕ್ಕೂ ಪ್ರಯೋಜನವಾಗಿಲ್ಲ: ಬಿ.ವೈ.ವಿಜಯೇಂದ್ರ

Davanagere: ದಾವಣಗೆರೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಲಿದ್ದು, ಉಭಯ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದು, ದಕ್ಷಿಣದಲ್ಲಿ ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಭಾರಿ ಮತಗಳ ಅಂತರದಿಂದ ವಿಜಯಶಾಲಿ ಆಗಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ವೈಫಲ್ಯಗಳು ಮತ್ತು ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನರು ಬೇಸತ್ತಿದ್ದು, ಜನರು ಬದಲಾವಣೆಯನ್ನ ಬಯಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದರೂ, ಅವುಗಳಿಂದ ರಾಜ್ಯಕ್ಕಾಗಲಿ ಅಥವಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕಾಗಲಿ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು.

ಅರಸು ನಂತರ ದಾಖಲೆಯ ಅವಧಿಯ ಆಡಳಿತ ನಡೆಸಿರುವುದಾಗಿ ಹೇಳುವ ಸಿದ್ದರಾಮಯ್ಯ, ಮಂಡಿಸಿರುವ ಬಜೆಟ್ ರೈತರಿಗೆ, ಬಡವರಿಗೆ ಮತ್ತು ಯುವಜನತೆಗೆ ಪೂರಕವಾಗಿಲ್ಲದ ಕಾರಣ ರಾಜ್ಯದ ಜನತೆ ಇದನ್ನು ತಿರಸ್ಕರಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರು ಕೂಡ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣವನ್ನು ಅರ್ಥಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದಡಿ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ಏಳಿಗೆಗಾಗಿ ಹಜ್ ಭವನ ನಿರ್ಮಾಣ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಅಲ್ಪಸಂಖ್ಯಾತರ ಪರವಾಗಿರುವವರು ಎಂದು ಹೇಳಿಕೊಳ್ಳುವವರು ಸಂಪೂರ್ಣ ಅವರನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಚಲವಾದಿ ನಾರಾಯಣಸ್ವಾಮಿ, ಆರ್ ಅಶೋಕ್ ಹಾಗೂ ಶಿವನಗೌಡ ನಾಯಕ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದು, ಮುಖಂಡರ ಈ ಪ್ರವಾಸವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳೆರಡರಲ್ಲೂ ಕಮಲ ಅರಳಲಿದೆ ಎಂದರು.

About The Author