ಕರಗ ಸಂಭ್ರಮಕ್ಕೆ ಬೆಂಗಳೂರು ರೆಡಿ; ದೀಪಾಲಂಕಾರದಿಂದ ರಸ್ತೆ ಝಗಮಗ!

ಬೆಂಗಳೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಕರಗ ಉತ್ಸವಕ್ಕೆ ನಗರ ಸಜ್ಜಾಗಿದೆ. ಏಪ್ರಿಲ್ 1ರಂದು ನಡೆಯಲಿರುವ ಬೆಂಗಳೂರು ಕರಗ ಹಿನ್ನೆಲೆ, ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಹೃದಯಭಾಗದಲ್ಲಿರುವ ಧರ್ಮರಾಯ ದೇವಸ್ಥಾನ ಸುತ್ತಮುತ್ತಲಿನ ಬೀದಿಗಳು ಈ ಬಾರಿ ಮೊದಲ ಬಾರಿಗೆ ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಸನ್ನತಿ ಬೀದಿ, ಜೆಸಿ ರಸ್ತೆ, ಕಾರ್ಪೋರೇಷನ್ ರಸ್ತೆ, SP ರಸ್ತೆ, ಅವೆನ್ಯೂ ರಸ್ತೆ, ಕೆ.ಆರ್. ಮಾರ್ಕೆಟ್, ಹಡ್ಸನ್ ಸರ್ಕಲ್, ಹಲಸೂರು ಗೇಟ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಆಕರ್ಷಕ ಲೈಟಿಂಗ್ ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ನಗರಕ್ಕೆ ಹೊಸ ಕಳೆ ತಂದಿದೆ. ವಿವಿಧ ವಿನ್ಯಾಸಗಳ ದೀಪಾಲಂಕಾರದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಬೆಂಗಳೂರಿಗರ ಗಮನ ಸೆಳೆದಿವೆ.

ಇಂದು ಹಸಿ ಕರಗ ನಡೆಯಲಿದ್ದು, ನಾಳೆ ಮುಖ್ಯ ಕರಗ ಉತ್ಸವ ಜರುಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಸುಮಾರು 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರಲ್ಲಿ 200ಕ್ಕೂ ಹೆಚ್ಚು ಸಂಚಾರಿ ಪೊಲೀಸರು ಸೇರಿದ್ದಾರೆ.

ಟೌನ್ ಹಾಲ್, ಕಾರ್ಪೋರೇಷನ್ ವಲಯ, ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರು ಮತ್ತು ಸಾರ್ವಜನಿಕರು ಯಾವುದೇ ತೊಂದರೆಯಿಲ್ಲದೆ ಉತ್ಸವದಲ್ಲಿ ಭಾಗವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರು ಕರಗ ಉತ್ಸವವು ನಗರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಪ್ರತೀಕವಾಗಿದೆ. ಧರ್ಮರಾಯ ದೇವಸ್ಥಾನದಿಂದ ಪ್ರಾರಂಭವಾಗುವ ಈ ಉತ್ಸವವು ಶತಮಾನಗಳ ಇತಿಹಾಸ ಹೊಂದಿದ್ದು, ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಈ ಬಾರಿ ವಿಶೇಷ ದೀಪಾಲಂಕಾರದಿಂದ ಉತ್ಸವಕ್ಕೆ ಹೆಚ್ಚುವರಿ ಮೆರಗು ಸಿಕ್ಕಿದ್ದು, ಬೆಳಕಿನ ಅಲಂಕಾರಗಳಿಂದ ನಗರವು ಝಗಮಗಿಸುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author