ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಹಳೆ ಪಾಳ್ಯ ಗ್ರಾಮದಲ್ಲಿರುವ ಐತಿಹಾಸಿಕ ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಶತಮಾನಗಳ ಸಂಪ್ರದಾಯದ ಜಾತ್ರೆ ಸಂಭ್ರಮ ಮನೆಮಾಡಿದೆ. ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಮಾರ್ಚ್ 31ರಂದು ಸಂಜೆ ಕಲ್ಯಾಣ ಮಹೋತ್ಸವ ಮತ್ತು ಏಪ್ರಿಲ್ 1ರಂದು ಬ್ರಹ್ಮ ರಥೋತ್ಸವ ಜರುಗಲಿವೆ.
ದೇವಾಲಯದ ಸ್ಥಳ ಪುರಾಣಕ್ಕೂ ವಿಶೇಷ ಮಹತ್ವವಿದೆ. ಕೃತಯುಗದಲ್ಲಿ ವಿತಂಕ ಎಂಬ ಅಸುರನು ರಾಮೇಶ್ವರನನ್ನು ಕುರಿತು ತಪಸ್ಸು ಮಾಡಿ, ಯಾರಿಂದಲೂ ಹತನಾಗದ ವರವನ್ನು ಪಡೆದಿದ್ದಾನೆಂದು ಹೇಳಲಾಗುತ್ತದೆ. ನಂತರ ಅವನು ಸಾಧು-ಸಜ್ಜನರಿಗೆ ಕಿರುಕುಳ ನೀಡಲು ಆರಂಭಿಸಿದಾಗ, ಪದ್ಮಾವತಿ ಅಮ್ಮನವರು ಈ ಸ್ಥಳದಲ್ಲಿ ತಪಸ್ಸು ಮಾಡಿ ವಿಷ್ಣುವಿನ ಅನುಗ್ರಹವನ್ನು ಬೇಡಿಕೊಂಡರು. ಆಗ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ತ್ರಿಮೂರ್ತಿಯಾಗಿ ಅವತರಿಸಿ ಅಸುರನನ್ನು ಸಂಹರಿಸಿದರು ಎಂಬ ನಂಬಿಕೆ ಇದೆ.
ಈ ಹಿನ್ನೆಲೆಯಿಂದ ಈ ಪ್ರದೇಶವು ಪದ್ಮಾವತಿಪುರಿ, ಇಂದ್ರಪ್ರಸ್ಥಪುರಿ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದ್ದು, ಪಾಳೆಗಾರರ ಆಳ್ವಿಕೆಯ ಹಿನ್ನೆಲೆಯಲ್ಲಿ “ಪಾಳ್ಯ” ಎಂಬ ಹೆಸರು ಪ್ರಚಲಿತಕ್ಕೆ ಬಂದಿದೆ. ದೇವಾಲಯದ ಮೂಲ ವಿಗ್ರಹವು ತ್ರಿಮೂರ್ತಿಯ ಪ್ರತಿರೂಪವಾಗಿದ್ದು, ಒಂದು ಕೈಯಲ್ಲಿ ಚಕ್ರ, ಇನ್ನೊಂದು ಕೈಯಲ್ಲಿ ಶಂಖ ಹೊಂದಿರುವ ವಿಶಿಷ್ಟ ರೂಪ ಭಕ್ತರ ಗಮನ ಸೆಳೆಯುತ್ತದೆ.
ಜಡೆ ಇರುವುದರಿಂದ ಶಿವನ ರೂಪ, ಶಂಖ-ಚಕ್ರಗಳಿಂದ ವಿಷ್ಣುವಿನ ರೂಪ, ಯಜ್ಞೋಪವೀತದಿಂದ ಬ್ರಹ್ಮನ ರೂಪ—ಹೀಗೆ ತ್ರಿಮೂರ್ತಿ ಸ್ವರೂಪವಾಗಿ ದೇವರು ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ಸ್ವಾಮಿಯನ್ನು “ಜಡೆ ಜನಾರ್ದನ”, “ಮಕ್ಕಳ ಜನಾರ್ದನ” ಹಾಗೂ “ಲಕ್ಷ್ಮೀ ಜನಾರ್ದನ” ಎಂದು ಕರೆಯಲಾಗುತ್ತದೆ. ದೇವಾಲಯದ ಸುತ್ತಮುತ್ತ ಶಂಖತೀರ್ಥ ಮತ್ತು ಚಕ್ರತೀರ್ಥ ಹರಿದು, ಸುಮಾರು 6 ಕಿಲೋಮೀಟರ್ ದೂರದ ಮಗೆಹಳ್ಳಿ ಬಳಿ ಸಂಗಮವಾಗಿ ಹೇಮಾವತಿ ನದಿಗೆ ಸೇರುತ್ತವೆ.
ವಾಸ್ತುಶಿಲ್ಪದ ದೃಷ್ಟಿಯಿಂದಲೂ ದೇವಾಲಯ ವಿಶೇಷವಾಗಿದ್ದು, ಮುಖ್ಯ ಗರ್ಭಗುಡಿಯಲ್ಲಿ ಭವ್ಯವಾದ ಲಕ್ಷ್ಮೀ ಜನಾರ್ದನಸ್ವಾಮಿ ವಿಗ್ರಹವಿದೆ. ಜೊತೆಗೆ ಜಯ-ವಿಜಯ ದ್ವಾರಪಾಲಕರು, ಧ್ವಜಸ್ತಂಭ, ವೈಕುಂಠ ನಾರಾಯಣಸ್ವಾಮಿ ದೇವಾಲಯ, 12 ಆಳ್ವಾರ್ ವಿಗ್ರಹಗಳು, ವೇಣುಗೋಪಾಲಕೃಷ್ಣ ದೇವಾಲಯ, ಗಣಪತಿ ಹಾಗೂ ವೀರಾಂಜನೇಯ ದೇವಾಲಯಗಳೂ ಇಲ್ಲಿ ಗಮನ ಸೆಳೆಯುತ್ತವೆ. ಜಾತ್ರೆಯ ಅಂಗವಾಗಿ ನಡೆಯುವ ಕಲ್ಯಾಣ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಸ್ಥಳದಲ್ಲಿ ಭಕ್ತಿ ಸಂಭ್ರಮ ಕಂಗೊಳಿಸುತ್ತಿದೆ.
ವರದಿ : ಲಾವಣ್ಯ ಅನಿಗೋಳ




