Mandya News: ಮಂಡ್ಯ ಪೋಲೀಸರ ಭರ್ಜರಿ ಕಾರ್ಯಾಚರಣೆ: ಪ್ರತ್ಯೇಕ ಪ್ರಕರಣದಲ್ಲಿ 28 ಕಳ್ಳರ ಬಂಧನ

Mandya News: ಮಂಡ್ಯದಲ್ಲಿ ಜಿಲ್ಲಾ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳನ್ನು ಬೇಧಿಸಿ, 28 ಜನರನ್ನು ಬಂಧಿಸಿದ್ದಾರೆ.

ಜಿಲ್ಲೆಯ ನಾಲ್ಕು ಪೊಲೀಸ್ ಉಪವಿಭಾಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತ ಆರೋಪಿಗಳಿಂದ ಒಟ್ಟು 2.20 ಕೋಟಿ ಮೌಲ್ಯದ ಚಿನ್ನಾಭರಣ,39 ಸಾವಿರ ನಗದು,26 ಬೈಕ್ 1 ಕಾರು ಜಪ್ತಿ ಮಾಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಎಸ್ಪಿ ಡಾ.ವಿ.ಜೆ ಶೋಭಾರಾಣಿ, ಈ ಪ್ರಕರಣದಲ್ಲಿ ಅಂತರಾಜ್ಯ ಕಳ್ಳ ಸೇರಿ ಅಪ್ರಾಪ್ತರು ಹಲವು ಕಡೆ ಕೃತ್ಯ ಎಸಗಿದ್ದರು. ಒಂದು ಪ್ರಕರಣದಲ್ಲಿ ಮನೆ ಮಗನೆ ಶೋಕಿಗಾಗಿ ತಮ್ಮದೇ ಮನೆ ಕಳ್ಳತನ ನಡೆಸಿದ್ದ.

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ 743.914 ಗ್ರಾಂ ತೂಕದ ಚಿನ್ನದ ಒಡವೆಗಳು, 2 ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 1.06 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಡೇವಿಡ್@ ಪೀಟರ್, ತಮಿಳುನಾಡು ವೆಲ್ಲೂರು ಜಿಲ್ಲೆಯ ನರೇಶ್ ಶಿವಶಂಕರ್, ಮದ್ದೂರು ತಾಲ್ಲೂಕು ಕೆ.ಎಂ.ದೊಡ್ಡಿಯ ಎಲ್. ಹನುಮಂತೇಗೌಡ, ಮೈಸೂರು ಜಿಲ್ಲೆ ಕಿರಗಸೂರು ಗ್ರಾಮದ ಎಸ್.ಎಂ. ನವೀನ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಇವರೆಲ್ಲ ಈ ಮುಂಚೆ ಜೈಲಿಗೆ ಹೋಗಿ, ಅಲ್ಲಿ ಫ್ರೆಂಡ್ಸ್ ಆದ ಬಳಿಕ, ಆಚೆ ಬಂದು, ಕಳ್ಳತನಕ್ಕೆ ಪ್ಲಾನ್ ಮಾಡಿ, ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ.

ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3.50 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಂಡವಪರ ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದ ಮಧು ಬಂಧಿತ ಆರೋಪಿಯಾಗಿದ್ದಾನೆ.

ಇನ್ನು ಚಿನ್ನಾಭರಣ ಕಳೆದುಕ“ಂಡವರಿಗೆ ಎಸ್ಪಿ ಚಿನ್ನಾಭರಣವನ್ನು ಹಿಂದಿರುಗಿಸಿದ್ದು, ಎಲ್ಲರೂ ಖುಷಿಯಾಗಿ, ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ, ಪೋಲೀಸರ ಈ ಕೆಲಸಕ್ಕೆ ಹಾರ ಹಾಕಿ, ಸನ್ಮಾನಿಸಿ ಗೌರವಿಸಿದ್ದಾರೆ. ಅಲ್ಲದೇ, ಪ್ರಕರಣ ಭೇಧಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಶೋಭಾರಾಣಿ ಪ್ರಶಂಸೆ, ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

About The Author