Political News: ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು, ಮೋದಿ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವುದು ಅನ್ಯಾಯ ಮಾತ್ರವಲ್ಲ, ನಿಷ್ಕರುಣೆಯ ಕ್ರೌರ್ಯ. ಮೋದಿ ಸರ್ಕಾರವು ಕರ್ನಾಟಕಕ್ಕೆ ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಗೆ ತೋರಿದಷ್ಟು ಕಾಳಜಿಯನ್ನೂ ತೋರುತ್ತಿಲ್ಲ. ಆ ದೇಶಗಳಿಗೆ ಅನುದಾನ ಕೊಡುವಷ್ಟು ಉದಾರತೆಯನ್ನು ಕರ್ನಾಟಕಕ್ಕೆ ತೋರುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಪ್ರಿಯಾಂಕ್, ಮೋದಿ ಸರ್ಕಾರವು ಕನ್ನಡಿಗರನ್ನು ಶತ್ರುಗಳಂತೆ ಕಾಣುತ್ತಿದೆ. ಪ್ರತಿ ಹಂತದಲ್ಲೂ, ಪ್ರತಿ ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯದ ಸರಣಿ ಮುಂದುವರೆಸಿದೆ. ಹದಿನೈದನೇ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಿದೆ, ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಅನ್ಯಾಯದ ದೊಡ್ಡ ಸಾಕ್ಷಿಗುಡ್ಡೆಯನ್ನೂ ಉಳಿಸಿದೆ. ಈ ವಂಚನೆ ಕೇವಲ 15ನೇ ಹಣಕಾಸು ಆಯೋಗದ ಅನುದಾನಕ್ಕೆ ಮಾತ್ರ ಸೀಮಿತವಲ್ಲ, ಬಜೆಟ್ ನಿಂದ ಹಿಡಿದು ನೆರೆ, ಬರ ಪರಿಹಾರಗಳು, ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿದಂತೆ ಎಲ್ಲದರಲ್ಲೂ ಕನ್ನಡಿಗರು ಮಲತಾಯಿ ಮಕ್ಕಳೇ.? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
ಇದರೊಂದಿಗೆ, ಮನರೇಗಾ ಯೋಜನೆಯೂ ಮಾರ್ಚ್ 31ಕ್ಕೆ ಕೊನೆಯಾಗಿದೆ, ಸದರಿ ಯೋಜನೆಯಲ್ಲಿ ಕರ್ನಾಟಕಕ್ಕೆ ₹1,943 ಕೋಟಿ ಅನುದಾನ ಬಾಕಿ ಇದೆ, ಈ ಅನುದಾನದ ಬಗ್ಗೆ ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟತೆ ನೀಡಿಲ್ಲ, ಏಪ್ರಿಲ್ 1ರಿಂದ ಜನರಿಗೆ ಉದ್ಯೋಗ ಒದಗಿಸಬೇಕಿದ್ದ ವಿಬಿ ಗ್ರಾಮ್ ಜಿ ಯೋಜನೆಯ ಸುಳಿವೂ ಇಲ್ಲ, ಈ ಯೋಜನೆಯ ಜಾರಿಗೆ ನಿಯಮಗಳ ರೂಪುರೇಷೆಯೂ ಸಿದ್ಧವಾಗಿಲ್ಲ. ಇದು ಗ್ರಾಮೀಣ ಜನರ ಕಾನೂನಾತ್ಮಕ ಉದ್ಯೋಗದ ಹಕ್ಕನ್ನು ಕಸಿದಂತಾಗಿಲ್ಲವೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
ಹಿಂದಿ ಪರೀಕ್ಷೆ ಮಾದರಿಯ ಬದಲಾವಣೆಯ ಕುರಿತು ಮೈಕಿನ ಮುಂದೆ ಅಬ್ಬರಿಸುವ ರಾಜ್ಯದ ಬಿಜೆಪಿ ನಾಯಕರು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಿದ್ದ ₹15, 583 ಕೋಟಿ ಹಣವನ್ನು ವಂಚಿಸಿರುವುದರ ಬಗ್ಗೆ ತುಟಿ ಬಿಚ್ಚುವುದಿಲ್ಲ. ಕನ್ನಡಿಗರ ಮತ್ತು ಕನ್ನಡನಾಡಿನ ಪರ ನಿಲ್ಲುವ ಕಾಳಜಿ ಅವರಿಗಿಲ್ಲ, ಮೋಶಾ ಜೋಡಿಯ ಸರ್ವಾಧಿಕಾರವನ್ನು ಪ್ರಶ್ನಿಸುವ ಧೈರ್ಯವಂತೂ ಇಲ್ಲವೇ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಚುನಾವಣಾಜೀವಿ ಶ್ರೀ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರದ ಬಗ್ಗೆ ಬಗೆಬಗೆಯಲ್ಲಿ ಮಾತನಾಡಿದ್ದರು, ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೊಡಬೇಕಿದ್ದ ₹6000 ಕೋಟಿ ಅನುದಾನದಲ್ಲಿ ಕೊಟ್ಟಿದ್ದು 0. ರಾಜ್ಯದ ಬಿಜೆಪಿ ನಾಯಕರು ಮೋದಿಯ ಈ ಆತ್ಮವಂಚನೆ ಮತ್ತು ಮೋಸದ ಆಟವನ್ನು ಪ್ರಶ್ನಿಸಿದ ದಿನವೇ ಅವರು ನಿಜವಾದ ಜನಪರ ರಾಜಕಾರಿಣಿಗಳಾಗುತ್ತಾರೆ. ನಿಜವಾದ ಅಚ್ಚೆ ದಿನ್, ಅಮೃತಕಾಲಗಳು ಬರುತ್ತವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.




