‘ಟೆಲಿ ಮನಸ್‌’ ಸಹಾಯವಾಣಿ ಕರೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Political News: ಮಾನಸಿಕ ನೆಮ್ಮದಿ ಇಲ್ಲದೇ, ಆತ್ಮಹತ್ಯೆಯ ಯೋಚನೆ ಮಾಡುವವರಿಗೆಂದೇ, ರಾಜ್ಯ ಸರ್ಕಾರದಲ್ಲಿ ಟೆಲಿಮನಸ್ ಎಂಬ ಪರಿಹಾರ ಕೇಂದ್ರವಿದೆ. ಬದುಕೋಕ್ಕೆ ಮನಸ್ಸಿಲ್ಲ ಎನ್ನುವವರು ಈ ಕೇಂದ್ರಕ್ಕೆ ಕರೆ ಮಾಡಿ, ನಿಮ್ಮ ಸಮಸ್ಯೆ ಹೇಳಿದರೆ, ಅವರು ಪರಿಹಾರ ನೀಡಿ, ಸಾವಿನ ದವಡೆಯಿಂದ ನಿಮ್ಮನ್ನು ಪಾರು ಮಾಡುತ್ತಾರೆ.

ಈ ಯೋಜನೆ ಶುರುವಾದಾಗಿನಿಂದ 18 ವರ್ಷ ಮೇಲ್ಪಟ್ಟ ಮಕ್ಕಳೇ ಕಾಲ್ ಮಾಡಿ, ಆತ್ಮಹತ್ಯೆಯ ಯೋಚನೆ ಬಗ್ಗೆ ಮಾತನಾಡಿದ್ದರೆಂಬ ಆತಂಕಕಾರಿ ವಿಷಯವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಮ್ಮ ‘ಟೆಲಿ ಮನಸ್‌’ ಸಹಾಯವಾಣಿಗೆ ಕರೆ ಮಾಡುವವರಲ್ಲಿ 18 ವರ್ಷದೊಳಗಿನ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ (ಸುಮಾರು 9%). ಅದರಲ್ಲೂ ಬೆಂಗಳೂರಿನಲ್ಲಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳ ಬಗ್ಗೆ ಅತಿ ಹೆಚ್ಚು ಕರೆಗಳು ಬರುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಜೊತೆಗೆ ಅಷ್ಟು ಜನರಿಗೆ ಸಾಂತ್ವನ ನೀಡಲು, ಮನೋಸ್ಥೈರ್ಯ ಹೆಚ್ಚಸಲು ಸಾಧ್ಯವಾಗಿದೆ ಎಂಬುದರ ಬಗ್ಗೆ ಹೆಮ್ಮೆ- ಸಮಾಧಾನವೂ ಇದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಜೀವನ ಎಂದರೆ ಕೇವಲ ಯಶಸ್ಸಲ್ಲ, ಏಳು-ಬೀಳುಗಳ ಸಂಗಮ. ಪರಿಹರಿಸಬಹುದಾದ ಹತಾಶೆಯಿಂದ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಶರಣಾಗಬೇಡಿ. ನಿಮ್ಮಲ್ಲಿ ಏನೇ ಸಮಸ್ಯೆ ಇರಲಿ, ಎಂತಹದ್ದೇ ಮಾನಸಿಕ ವೇದನೆ ಇರಲಿ, ಅದನ್ನು ನಿಮ್ಮೊಳಗೆ ಇಟ್ಟುಕೊಂಡು ಕುಗ್ಗಬೇಡಿ. ಸಹಾಯವಾಣಿಗೆ ಕರೆ ಮಾಡಿ ಮುಕ್ತವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಿ. ನಮ್ಮ ಆರೋಗ್ಯ ಇಲಾಖೆಯ ತಜ್ಞರು ನಿಮ್ಮ ಪ್ರತಿ ಮಾತನ್ನೂ ಅತ್ಯಂತ ಆಪ್ತವಾಗಿ ಕೇಳಿಸಿಕೊಳ್ಳುತ್ತಾರೆ. ನೆನಪಿಡಿ ನೀವು ಒಬ್ಬಂಟಿಯಲ್ಲ, ನಿಮ್ಮ ಯಾವುದೇ ಸಂಕಷ್ಟಕ್ಕೆ ವೈಜ್ಞಾನಿಕ ಮತ್ತು ಮಾನವೀಯ ನೆಲೆಯಲ್ಲಿ ನೆರವು ನೀಡಲು ನಮ್ಮ ಇಡೀ ತಂಡ ಸನ್ನದ್ಧವಾಗಿದೆ. ಸಕಾಲಿಕ ನೆರವಿಗಾಗಿ ಯಾವುದೇ ಅಂಜಿಕೆ ಅಥವಾ ಮುಜುಗರವಿಲ್ಲದೆ 14416 ಅಥವಾ 112 ಗೆ ಕರೆ ಮಾಡಿ ಎಂದು ಆರೋಗ್ಯ ಸಚಿವರು ಧೈರ್ಯ ತುಂಬಿದ್ದಾರೆ.

About The Author