ಪ್ರಧಾನಿ ಮೋದಿಗಾಗಿ ರೆಡಿ ಸ್ಪೆಷಲ್ ‘ಮೈಸೂರು ಪೇಟ’

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ವೇಳೆ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರ ಸಂಪೂರ್ಣವಾಗಿ ಸಜ್ಜುಗೊಂಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಮಂದಿರವು ವಿಶಿಷ್ಟ ವಾಸ್ತುಶಿಲ್ಪದಿಂದ ಗಮನಸೆಳೆಯುತ್ತಿದೆ. ಕಾರ್ಯಕ್ರಮಕ್ಕಾಗಿ BGS ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ಸಿದ್ಧಗೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ವಿಶೇಷ ‘ಮೈಸೂರು ಪೇಟ’ ಸಿದ್ಧಪಡಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಸಿಂಗ್ ಐದು ದಿನಗಳ ಶ್ರಮದಿಂದ ಇದನ್ನು ರೂಪಿಸಿದ್ದಾರೆ. ಈ ಪೇಟವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಶೈಲಿಯನ್ನು ಆಧರಿಸಿಕೊಂಡಿದ್ದು, ಬನಾರಸ್ ಬಟ್ಟೆ ಹಾಗೂ ಗಂಡಭೇರುಂಡ ವಿನ್ಯಾಸದಿಂದ ಅಲಂಕರಿಸಲಾಗಿದೆ.

ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯ ವತಿಯಿಂದ ಈ ಗೌರವವನ್ನು ಪ್ರಧಾನಿಗೆ ಸಲ್ಲಿಸಲಾಗುತ್ತಿದೆ. ಒಟ್ಟಾರೆ, ಪ್ರಧಾನಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಉತ್ಸಾಹದ ಅಲೆ ಎದ್ದಿದ್ದು, ಭಕ್ತರು ಈ ಐತಿಹಾಸಿಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author