ಮದುವೆಗೆ ಯುವತಿ ಒಪ್ಪದಿದ್ದಕ್ಕೆ ಮುಖ ಚಚ್ಚಿದ ಸೈಕೋ!

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ‘ಲವ್ ಜಿಹಾದ್’ ಆರೋಪ ಕೇಳಿಬಂದಿದೆ. ಮದುವೆಗೆ ನಿರಾಕರಿಸಿದ ಹಿಂದೂ ಯುವತಿಯ ಮೇಲೆ ಜುಹೇಬ್ ಎಂಬ ಯುವಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ಬೆಂಗಳೂರಿನ ಫ್ರೇಜರ್ ಟೌನ್ ಪ್ರದೇಶದಲ್ಲಿ ನಡೆದಿದ್ದು, ಸಂತ್ರಸ್ತ ಯುವತಿ ವೃತ್ತಿಯಲ್ಲಿ ಮಾಡೆಲ್ ಹಾಗೂ ನಟಿಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜುಹೇಬ್ ಎಂಬಾತನ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು ಎಂದು ಹೇಳಲಾಗಿದೆ.

ಆದರೆ, 2024ರಿಂದಲೇ ಜುಹೇಬ್ ಯುವತಿಯ ಮೇಲೆ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ ಎನ್ನಲಾಗಿದೆ. ಯುವತಿ ಮದುವೆಗೆ ನಿರಾಕರಿಸಿದ ಬಳಿಕ ಆರೋಪಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ನೀನು ನನ್ನನ್ನು ಮದುವೆಯಾಗದಿದ್ದರೆ ಕೊಲೆ ಮಾಡುತ್ತೇನೆ” ಎಂದು ಜುಹೇಬ್ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವಿಚಾರವಾಗಿ ಫ್ರೇಜರ್ ಟೌನ್ ಪ್ರದೇಶದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆ ವೇಳೆ ಆರೋಪಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಹಲ್ಲೆಯಲ್ಲಿ ಯುವತಿಯ ಮುಖ ಹಾಗೂ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಸ್ಥಿತಿಯಲ್ಲಿರುವ ವಿಡಿಯೋವನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಇದೇ ವೇಳೆ, ಜುಹೇಬ್ ತನ್ನ ವಾಟ್ಸಾಪ್ ಸಂದೇಶಗಳಲ್ಲಿ ಯುವತಿಯನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. “ಆಕೆ ಸಾಯಬೇಕು”, “ನಾನು ಆಕೆಯನ್ನು ಬಿಡುವುದಿಲ್ಲ” ಎಂಬ ರೀತಿಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಜುಹೇಬ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.

ವರದಿ : ಲಾವಣ್ಯ ಅನಿಗೋಳ

About The Author