ಮೈಸೂರಿನ ರಸ್ತೆಗಳಲ್ಲಿ ರಾಜಗಾಂಭೀರ್ಯದಿಂದ ಸಂಚರಿಸುತ್ತಿದ್ದ ಕೆಂಪು ಬಣ್ಣದ ಐಷಾರಾಮಿ ವೋಲ್ವೋ ಬಸ್ಗಳ ಯುಗಕ್ಕೆ ಈಗ ತೆರೆ ಬೀಳುತ್ತಿದೆ. KSRTCಗೆ ಹೆಮ್ಮೆಯಾಗಿದ್ದ ಮೈಸೂರು ನಗರ ಸಾರಿಗೆಯ 33 ವೋಲ್ವೋ ಬಸ್ಗಳು ಸಂಚಾರ ಸ್ಥಗಿತಗೊಳಿಸಿ ಗುಜರಿಗೆ ಸೇರಲಿವೆ.
ಈ ಬಸ್ಗಳನ್ನು ದಿಢೀರ್ ಆಗಿ ಸೇವೆಯಿಂದ ತೆಗೆದುಹಾಕಲು ಕಾರಣ ಕೇಂದ್ರ ಸರ್ಕಾರದ ಸ್ಕ್ರ್ಯಾಪಿಂಗ್ ಪಾಲಿಸಿ. ಹೊಸ ನಿಯಮದ ಪ್ರಕಾರ, 15 ವರ್ಷ ಪೂರೈಸಿದ ಯಾವುದೇ ಸರ್ಕಾರಿ ವಾಹನಗಳನ್ನು ರಸ್ತೆಗೆ ಇಳಿಸಲು ಅವಕಾಶವಿಲ್ಲ. ಮೈಸೂರಿನಲ್ಲಿ ಸಂಚರಿಸುತ್ತಿದ್ದ ಈ ಎಲ್ಲಾ ವೋಲ್ವೋ ಬಸ್ಗಳು 15 ವರ್ಷದ ಅವಧಿ ಪೂರೈಸಿರುವುದರಿಂದ, ಅವುಗಳನ್ನು ಸೇವೆಯಿಂದ ಕೈಬಿಡುವುದು ಅನಿವಾರ್ಯವಾಗಿದೆ.
ಹೆಬ್ಬಾಳಿನ ಇನ್ಫೋಸಿಸ್ ಮತ್ತು ವಿಪ್ರೋ ಉದ್ಯೋಗಿಗಳಿಗೆ ಈ ವೋಲ್ವೋ ಬಸ್ಗಳು ಪ್ರಮುಖ ಸಾರಿಗೆ ಸೌಲಭ್ಯವಾಗಿದ್ದವು. ಜೊತೆಗೆ ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರು, ಜೆ.ಪಿ.ನಗರ ಮತ್ತು ವಿಜಯನಗರ ಭಾಗದ ನಿವಾಸಿಗಳು ಸಹ ಆರಾಮದಾಯಕ ಪ್ರಯಾಣಕ್ಕಾಗಿ ಈ ಬಸ್ಗಳನ್ನು ಹೆಚ್ಚು ಬಳಸುತ್ತಿದ್ದರು.
ಒಂದು ಲೀಟರ್ ಡೀಸೆಲ್ಗೆ ಕೇವಲ 2 ಕಿ.ಮೀ ಮೈಲೇಜ್ ನೀಡುತ್ತಿದ್ದರೂ, ಪ್ರಯಾಣಿಕರ ಮೆಚ್ಚುಗೆಯ ಕಾರಣಕ್ಕೆ KSRTC ಇಷ್ಟು ವರ್ಷ ಈ ಸೇವೆಯನ್ನು ಮುಂದುವರಿಸಿತ್ತು. ಈಗ ಹಳೆಯ ತಂತ್ರಜ್ಞಾನಕ್ಕೆ ವಿದಾಯ ಹೇಳುವ ಸಮಯ ಬಂದಿದೆ.
ಈ ಕೆಂಪು ಬಸ್ಗಳ ಜಾಗವನ್ನು ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಗಳು ಅಥವಾ ಹೊಸ ಮಾದರಿಯ ಆಧುನಿಕ ವೋಲ್ವೋ ಬಸ್ಗಳು ಭರಿಸುವ ನಿರೀಕ್ಷೆಯಿದೆ. ಆದರೆ ಮೈಸೂರಿನ ಸಾರಿಗೆ ಇತಿಹಾಸದಲ್ಲಿ ಗುರುತು ಮೂಡಿಸಿದ್ದ ಈ ‘ಕೆಂಪು ಸುಂದರಿ’ಯ ನೆನಪು ಮಾತ್ರ ಮೈಸೂರಿಗರ ಮನದಲ್ಲಿ ಸದಾ ಉಳಿಯಲಿದೆ.
ವರದಿ : ಲಾವಣ್ಯ ಅನಿಗೋಳ




