ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನಜೀವನ ತತ್ತರಿಸಿದೆ. ಇದರ ಪರಿಣಾಮವಾಗಿ ರಕ್ತದಾನ ಶಿಬಿರಗಳಿಗೆ ಆಗಮಿಸುವ ದಾನಿಗಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಹಲವು ರಕ್ತ ನಿಧಿಗಳು ತೀವ್ರ ಕೊರತೆ ಎದುರಿಸುತ್ತಿವೆ.
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ನಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರತಿದಿನ 90 ರಿಂದ 100 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಪ್ರಸ್ತುತ ಬೇಸಿಗೆಯ ಕಾರಣಕ್ಕೆ ಕೇವಲ 10 ರಿಂದ 15 ಯೂನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಸಿಲಿನ ತಾಪಮಾನದಿಂದಾಗಿ ದೌರ್ಬಲ್ಯ, ತಲೆ ಸುತ್ತು ಮತ್ತು ಅಸ್ವಸ್ಥತೆಗಳ ಭಯದಿಂದ ದಾನಿಗಳು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತದ ಬೇಡಿಕೆ ಹೆಚ್ಚುತ್ತಿದ್ದರೂ ಕೂಡಾ, ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಸಂಕಷ್ಟ ಉಂಟಾಗಿದೆ.
ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕಿನ ಟ್ರಸ್ಟಿಗಳ ಪ್ರಕಾರ, ರಕ್ತದಾನ ಮಾಡಿದ ನಂತರ ಸರಿಯಾದ ವಿಶ್ರಾಂತಿ ಪಡೆದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಬಿಸಿಲಿನ ಮಧ್ಯೆಯೂ ರಕ್ತದಾನ ಸಂಪೂರ್ಣ ಸುರಕ್ಷಿತವಾಗಿದ್ದು, ದಾನಿಗಳು ಭಯಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳು ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮೂಲಕ ಜನರ ಜೀವಗಳನ್ನು ಉಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ರಕ್ತದಾನವೇ ಜೀವದಾನ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅರಿತು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದ್ದಾರೆ.




