ನಡು ರಸ್ತೆಯಲ್ಲಿ ರಜತ್ ರೀಲ್ಸ್ ಸ್ಟಂಟ್! ಪೆಟ್ರೋಲ್ ಸ್ಫೋಟ ವಿಡಿಯೋ ವೈರಲ್

ಕನ್ನಡ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ರೀಲ್ಸ್ ಶೂಟಿಂಗ್ ಹೆಸರಿನಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಮತ್ತೆ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.

ರಜತ್ ನಡು ರಸ್ತೆಯಲ್ಲಿ ಕವರ್ ಒಳಗೆ ಪೆಟ್ರೋಲ್ ತುಂಬಿಸಿ ಅದನ್ನು ಬ್ಲಾಸ್ಟ್‌ ಮಾಡಿ ರೀಲ್ಸ್ ಶೂಟ್ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾ ಪೇಜ್ ನಲ್ಲಿ ಹರಿಬಿಟ್ಟಿದ್ದರು. ಈ ರೀತಿ ನಡುರಸ್ತೆಯಲ್ಲಿ ಪೆಟ್ರೋಲ್‌ ಬಳಕೆ ಮಾಡಿ ಬ್ಲಾಸ್ಟ್‌ ಮಾಡಿರುವುದು ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವಂತೆ ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇವರ ಈ ರೀಲ್ಸ್‌ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಕೂಡ ರಜತ್ ಅವರು ವಿನಯ್ ಗೌಡ ಜೊತೆ ಲಾಂಗ್‌ ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಒಳಗಾಗಿದ್ದರು. ಜೊತೆಗೆ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಸಿಗರೇಟ್ ಹಿಡಿದು ಫೋಟೋಶೂಟ್ ಮಾಡಿಸಿಕೊಂಡು ಟೀಕೆಗೆ ಗುರಿಯಾಗಿದ್ದರು. ಶೂಟಿಂಗ್ ಸೆಟ್‌ನಲ್ಲಿ ಮಚ್ಚು ಹಿಡಿದು ಪೋಸ್ ಕೊಟ್ಟಿದ್ದ ಚಿತ್ರಗಳೂ ಹಿಂದೆ ವೈರಲ್ ಆಗಿದ್ದು ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದ್ದರು. ಈಗ ಮತ್ತೊಮ್ಮೆ ಪೆಟ್ರೋಲ್ ಸ್ಫೋಟ ಮಾಡಿ ಸಮಸ್ಯೆಗೆ ಸಿಲುಕಿದ್ದಾರೆ. ಘಟನೆ ನಡೆದ ಸ್ಥಳ ಮತ್ತು ಸಮಯದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಪಬ್ಲಿಕ್ ಪ್ಲೇಸ್‌ನಲ್ಲಿ ಇಂತಹ ಅಪಾಯಕಾರಿಯಾದ ಸ್ಟಂಟ್ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರ ‌ರೀಲ್ಸ್‌ ಹುಚ್ಚಾಟಕ್ಕೆ ಬೇಸತ್ತ ನೆಟ್ಟಿಗರು ಇಂತಹ ರೀಲ್ಸ್‌ ಮಾಡುವವರ ವಿರುದ್ದ ಕಠೀಣ ಕ್ರಮ ತೆಗೆದುಕೊಳ್ಳಬೇಕು ಎಂದು ಧ್ವನಿ ಎತ್ತಿದ್ದಾರೆ.

About The Author