ʼನೇಹಾ -ಕೇಸ್‌ʼಗೆ ನ್ಯಾಯ ಯಾವಾಗ? ಹುಬ್ಬಳ್ಳಿ ಕೋರ್ಟ್ ಬಿಗ್ ಅಪ್‌ಡೇಟ್!

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಎರಡು ವರ್ಷ ಕಳೆದರೂ ನ್ಯಾಯ ಇನ್ನೂ ಅಂತಿಮವಾಗಿಲ್ಲ ಎಂಬ ಆರೋಪಗಳು ಹೆಚ್ಚುತ್ತಿವೆ. ನೇಹಾ ಪರ ವಕೀಲರಾದ ರಾಘವೇಂದ್ರ ಮುತಗಿಕರ ಹಂತಕನ ಜಾಮೀನು ಅರ್ಜಿ ವಜಾ ಮಾಡಲು ಸಾಕಷ್ಟು ಪ್ರತಿವಾದ ಮಂಡಿಸಿ ಯಶಸ್ವಿಯಾಗಿದ್ದಾರೆ. ಆರೋಪಿ ಫಯಾಜ್‌ನ ಜಾಮೀನು ಅರ್ಜಿ ಐದನೇ ಬಾರಿಯೂ ತಿರಸ್ಕೃತಗೊಂಡಿದ್ದು, ಪ್ರಕರಣ ಮತ್ತೆ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಹುಬ್ಬಳ್ಳಿ ಬಿವಿಬಿ ಕಾಲೇಜ್ ಆವರಣದಲ್ಲಿ 2024 ಏಪ್ರಿಲ್ 18ರಂದು ನಡೆದ ನೇಹಾ ಹಿರೇಮಠ ಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ದಾಳಿ ನಂತರ ರಾಜ್ಯಾದ್ಯಂತ ಆಕ್ರೋಶ, ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಇದೀಗ ಎರಡು ವರ್ಷಗಳ ನಂತರವೂ ಪ್ರಕರಣ ಪೂರ್ಣ ಅಂತಿಮ ತೀರ್ಪಿಗೆ ತಲುಪಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಶೀಘ್ರ ನ್ಯಾಯ ಕೊಡಿಸುತ್ತೇವೆ ಎಂಬ ಸರ್ಕಾರದ ಭರವಸೆ ಈವರೆಗೂ ಜಾರಿಯಾಗಿಲ್ಲ ಎಂದು ಕುಟುಂಬಪಕ್ಷದವರು ಆರೋಪಿಸುತ್ತಿದ್ದಾರೆ.

ಇದೀಗ ಕೋರ್ಟ್‌ನಲ್ಲಿ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಐದನೇ ಬಾರಿಯೂ ತಿರಸ್ಕರಿಸಲಾಗಿದೆ. ನೇಹಾ ಪರ ವಕೀಲರು ಬಲವಾದ ವಾದ ಮಂಡಿಸಿದ್ದಾರೆ. ಪರಿಣಾಮ ಜಾಮೀನು ಮಂಜೂರಾಗಿಲ್ಲ ಎನ್ನುವ ಮಾಹಿತಿ ದೊರಕಿದೆ.

ಈ ಪ್ರಕರಣ ಈಗ ಕೇವಲ ಒಂದು ಕ್ರಿಮಿನಲ್ ಕೇಸ್ ಆಗಿ ಮಾತ್ರ ಉಳಿದಿಲ್ಲ. ನ್ಯಾಯ ವಿಳಂಬ, ಸರ್ಕಾರದ ಭರವಸೆಗಳು, ಹಾಗೂ ಸಾರ್ವಜನಿಕ ಒತ್ತಡ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿದರೆ, ಇನ್ನೊಂದು ಕಡೆ ಕುಟುಂಬದ ನೋವು ಹಾಗೂ ನ್ಯಾಯ ಯಾವಾಗ ಸಿಗುತ್ತದೆ? ಎಂಬ ಸಾರ್ವಜನಿಕರ ಪ್ರಶ್ನೆ ಹೆಚ್ಚುತ್ತಿವೆ. ಈ ಪ್ರಕರಣದ ಮುಂದಿನ ಹಂತಗಳ ಮೇಲೆ ಈಗ ಎಲ್ಲರ ಗಮನ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ತೀರ್ಪು ಮತ್ತು ಸರ್ಕಾರದ ಕ್ರಮವೇ ನಿರ್ಣಾಯಕವಾಗಲಿದೆ.

About The Author