Political News: ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಸಬೇಡಿ, ಫಾರಿನ್ ಪ್ರವಾಸ ಹೋಗಬೇಡಿ, 1 ವರ್ಷ ಖರ್ಚು ಕಡಿಮೆ ಮಾಡಿ, ವರ್ಕ್ ಫ್ರಮ್ ಹೋಮ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಈ ಸಲಹೆ ನೀಡಿದ್ದಕ್ಕೆ, ಬಿಜೆಪಿ ವಿರೋಧಿಗಳು, ಮೋದಿ ವಿರೋಧಿಗಳು, ಇದೇನಾ ಅಚ್ಛೇದಿನ್ ಅಂತಾ ಕೇಳಿದ್ದಾರೆ. ಹೀಗೆ ಕಿಡಿಕಾರಿದ್ದನ್ನು ವಿರೋಧಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು, ಇದೇ ರೀತಿ ಚಿನ್ನ ಖರೀದಿಸಬೇಡಿ ಎಂದು ಹೇಳಿದ್ದರು. ಆಗ ಅವರಿಗೆ ಇದೆಲ್ಲ ಆರ್ಥಿಕ ಸಲಹೆ ಆಗಿತ್ತು. ಆದರೆ ಈಗ ಆರ್ಥಿಕ ಸಂಕಷ್ಟ ಎನ್ನಿಸುತ್ತಿದೆ ಎಂದು ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು ‘ನಿತ್ಯ ಕಾಯಕ’ವಾಗಿಬಿಟ್ಟಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ ಎಂದು ಅಶೋಕ್ ಹೇಳಿದ್ದಾರೆ.
1967 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ ‘ಚಿನ್ನ ಕೊಳ್ಳಬೇಡಿ’ ಎಂದು ಜನರಲ್ಲಿ ಮನವಿ ಮಾಡಿದ್ದರು. 2013 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಾಲ್ತಿ ಖಾತೆ ಕೊರತೆ (CAD) ಸರಿದೂಗಿಸಲು ‘ಚಿನ್ನದ ಮೇಲಿನ ವ್ಯಾಮೋಹ ಬಿಡಿ’ ಎಂದು ಪದೇ ಪದೇ ಗೋಗರೆದಿದ್ದರು.
‘ದೊರೆ ಮಾಡಿದರೆ ದಂಡವಿಲ್ಲ’ ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು “ಆರ್ಥಿಕ ನೀತಿ”. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ಕರೆ ನೀಡಿದರೆ ಅದು ಇವರಿಗೆ ತಪ್ಪಾಗಿ ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ ಎಂದು ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.




