ಫೈರೋಜ್ ಹತ್ಯೆ ಕೇಸ್ ಬಿಗ್ ಟ್ವಿಸ್ಟ್! ತಲೆಮರೆಸಿಕೊಂಡ ಕೈ ನಾಯಕ?

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಧಾರವಾಡದ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.

ಫೈರೋಜ್ ಪಠಾಣ್ ಹತ್ಯೆಯಾದ ಬಳಿಕ ಇಸ್ಮಾಯಿಲ್ ತಮಟಗಾರ ಹಾಗೂ ಫೈರೋಜ್ ನಡುವಿನ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಸಂಭಾಷಣೆಯಲ್ಲಿ ತಮಟಗಾರ ಅವರು ಫೈರೋಜ್ ಪಠಾಣ್ ಅವರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು. ʼಮನೆಗೆ ಹೊಕ್ಕು ಹೊಡೆಯುತ್ತಾರೆ, ಎಚ್ಚರದಿಂದಿರಿʼ ಎಂಬ ಮಾತುಗಳು ಆಡಿಯೋದಲ್ಲಿ ಕೇಳಿಬಂದಿದ್ದವು ಎಂದು ತಿಳಿದುಬಂದಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಮುಖ ಆರೋಪಿಗಳನ್ನು ಸೇರಿದಂತೆ ಹಲವು ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ. ಆಡಿಯೋ ವೈರಲ್ ಆದ ನಂತರ ವಿಚಾರಣೆಗೆ ಹಾಜರಾಗುವಂತೆ ಇಸ್ಮಾಯಿಲ್ ತಮಟಗಾರ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಅವರು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ಮಾಯಿಲ್ ತಮಟಗಾರ ವಿದೇಶಕ್ಕೆ ತೆರಳಿರುವ ಶಂಕೆಯೂ ವ್ಯಕ್ತವಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಇದಾದರೂ ಅವರು ಇನ್ನೂ ಪೊಲೀಸರ ಮುಂದೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ತಮ್ಮ ವಕೀಲರ ಮೂಲಕ ಇಸ್ಮಾಯಿಲ್ ತಮಟಗಾರ ಧಾರವಾಡ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ಕುರಿತು ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.

About The Author