ಬೆಂಗಳೂರಿಗರಿಗೆ ಬಿಗ್ ಶಾಕ್! ಬೆಲೆ ಏರಿಕೆಗೆ ಕಾರಣ ಇಲ್ಲಿದೆ!

ಬೆಂಗಳೂರಿನ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ ವಾರವಷ್ಟೇ ಅಡುಗೆ ಎಣ್ಣೆಯ ಬೆಲೆ ಏರಿಕೆಯಾಗಿತ್ತು, ಅದರ ಬೆನ್ನಲ್ಲೇ ಈಗ ಅಕ್ಕಿ ದರವೂ ಗಗನಕ್ಕೇರಲು ಸಜ್ಜಾಗಿದೆ. ಕಚ್ಚಾ ವಸ್ತುಗಳ ಕೊರತೆ ಹಾಗೂ ರಫ್ತು ಪ್ರಮಾಣದಲ್ಲಿನ ಏರಿಕೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಅಕ್ಕಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ಇದರೊಂದಿಗೆ ಇಂಧನ, ಆಟೋ ಎಲ್​​ಪಿಜಿ, ಕಮರ್ಷಿಯಲ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿ ಬಹುತೇಕ ಅಗತ್ಯ ವಸ್ತುಗಳು ತುಟ್ಟಿಯಾದಂತಾಗಿದೆ.

ಹೋಲ್‌ಸೇಲ್ ಅಂದ್ರೆ ಸಗಟು ಮಾರುಕಟ್ಟೆಯಲ್ಲಿ ಒಂದು ಅಕ್ಕಿ ಚೀಲದ ಬೆಲೆ 55 ರಿಂದ 60 ರೂಪಾಯಿಯಷ್ಟು ಏರಿಕೆಯಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಚೀಲದ ಮೇಲೆ 60 ರಿಂದ 80 ರೂ ಹೊರೆ ಬೀಳಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಸಗಟು ದರದಲ್ಲಿ ಮತ್ತೆ 4 ರಿಂದ 5 ರೂಪಾಯಿ ಏರಿಕೆಯಾಗಲಿದೆ ಎಂದು ಬೆಂಗಳೂರಿನಲ್ಲಿ ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಹಾಗಾದ್ರೆ ಅಕ್ಕಿ ಬೆಲೆ ಏರಿಕೆಗೆ ಕಾರಣಗಳೇನು ಅಂತ ನೋಡೋದಾದ್ರೆ ಕೃಷಿ ಉತ್ಪನ್ನಗಳ ಕಚ್ಚಾ ವಸ್ತುಗಳ ಕೊರತೆಯು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಭಾರತದಿಂದ ಶ್ರೀಲಂಕಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತು ಆಗುತ್ತಿದ್ದು, ಅಲ್ಲಿಂದ ಇತರ ದೇಶಗಳಿಗೆ ರಫ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅಕ್ಕಿ ದಾಸ್ತಾನು ಕಡಿಮೆಯಾಗುತ್ತಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಇನ್ನು ಅಡುಗೆ ಎಣ್ಣೆಯ ಬೆಲೆಯೂ ಈಗಾಗಲೇ ಏರಿಕೆಯಾಗಿರುವುದರಿಂದ ಸಾಮಾನ್ಯ ಜನರ ಮಾಸಿಕ ಬಜೆಟ್ ಮೇಲೆ ಇದು ದೊಡ್ಡ ಪರಿಣಾಮ ಬೀರಿದೆ.

About The Author